ಬೆಳೆ ಹಾನಿ ಪ್ರದೇಶಕ್ಕೆ ಶಾಸಕರು
ಗುಡಿಬಂಡೆ: ತಾಲೂಕಿನ ವರ್ಲಕೊಂಡ ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ತೊಗರಿ, ರಾಗಿ ಮುಂತಾದ ಬೆಳೆಗಳಿಗೆ ಕೆಂಪು ತಲೆ ಕಂಬಳಿ ಹುಳುಗಳ ಕಾಟ ಹೆಚ್ಚಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕರನ್ನು ಭೇಟಿಯಾದ ರೈತರು, ಕೀಟಗಳ ಭಾದೆಯಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಫಸಲು ನಷ್ಟವಾಗಿದೆ. ಈ ಬಗ್ಗೆ ಕೃಷಿ ಇಲಾಖೆಗೆ ಮಾಹಿತಿ ನೀಡಲಾಗಿ ಅಧಿಕಾರಿಗಳು ಕೀಟನಾಶಕಗಳನ್ನು ಬಳಸುವಂತೆ ಸೂಚನೆ ನೀಡಿ, ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಔಷಧ ವಿತರಿಸಿದ್ದಾರೆ. ಆದರೆ ಕೀಟನಾಶಕ ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇಲ್ಲದ ಕಾರಣ ಸಮಸ್ಯೆಯಾಗಿದೆ. ಹೀಗಾಗಿ ಬೆಳೆ ನಷ್ಟವಾಗಿದ್ದು, ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.
ರಿಯಾಯಿತಿ ದರ: ಸ್ಥಳದಲ್ಲಿದ್ದ ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಕುರಿತು ಶಾಸಕರಿಗೆ ವಿವರಿಸಿ, ಹುಳುಗಳ ನಿಯಂತ್ರಣಕ್ಕೆ ಕೀಟನಾಶಕಗಳನ್ನು ಬಳಸಲು ರೈತರಿಗೆ ಸೂಚಿಸಲಾಗಿದ್ದು, ಈಗಾಗಲೇ ರಿಯಾಯಿತಿದರದಲ್ಲಿ ಹಲವರಿಗೆ ನೀಡಲಾಗಿದೆ. ಇಲಾಖೆ ಮೂಲಕ ಕೀಟನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಏರ್ಪಡಿಸಿ ಅರಿವು ಮೂಡಿಸಲಾಗುವುದೆಂದರು. ಶಾಸಕರ ಜೊತೆಯಲ್ಲಿದ್ದ ಜಿ.ಪಂ. ಸದಸ್ಯ ಎಂ.ವಿ. ಕೃಷ್ಣಪ್ಪ, ರೈತರು ಅಧಿಕಾರಿಗಳಿಗೆ ಸಹಕಾರ ನೀಡಿ ಕೀಟ ನಿಯಂತ್ರಣ, ಇಳುವರಿ ಹೆಚ್ಚಳ, ಹಾಗೂ ಆಧುನಿಕ ಕೃಷಿ ಬಗ್ಗೆ ತಿಳಿದುಕೊಳ್ಳಬೇಕೆಂದರು. ತಹಸೀಲ್ದಾರ್ ನಂಜಪ್ಪ, ಮುಖಂಡರಾದ ಕೃಷ್ಣೇಗೌಡ, ಚೆಂಡೂರು ವೆಂಕಟೇಶ್, ಕೃಷಿ ಅಧಿಕಾರಿಗಳಾದ ಮಂಜುನಾಥ್, ಶಂಕರಯ್ಯ ಮತ್ತು ಹಲವು ರೈತರು ಶಾಸಕರೊಂದಿಗಿದ್ದರು.