ಶಿಕ್ಷಕರ ತಾತ್ಕಾಲಿಕ ನಿಯೋಜನೆ ವಿರೋಧಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಟೇಕಲ್: ಮಾಸ್ತಿ ಹೋಬಳಿಯ ತಿಪ್ಪಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ. ಸಂಪಂಗಿರನ್ನು ಸೆ.9 ರಿಂದ ಬಂಗಾರಪೇಟೆ ತಾಲೂಕಿನ ಲೋಕಶಿಕ್ಷಣ ಸಮಿತಿಗೆ ಸಂಯೋಜನಾಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ಆದರೆ ಗಡಿ ಭಾಗದ ಈ ಶಾಲೆಯಲ್ಲಿ 61 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವರ್ಗಾವಣೆಯಿಂದ ಇವರ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆಯಾಗಿದೆ. ಆದ್ದರಿಂದ ಇವರ ನಿಯೋಜನೆ ರದ್ದುಗೊಳಿಸಿ ಮೂಲ ಸ್ಥಳಕ್ಕೆ ಕಳುಹಿಸಬೇಕೆಂದು ಕರ್ನಾಟಕ ದಲಿತ ಸಿಂಹ ಸೇನೆ ಜಿಲ್ಲಾ ಸಮಿತಿ, ಶಾಲೆಯ ವಿದ್ಯಾರ್ಥಿಗಳು, ಪೋಷಕರು ಶಾಲೆಗೆ ಬೀಗ ಜಡಿದು ಹೋರಾಟ ಹಮ್ಮಿಕೊಂಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಪಂ ಸಿಇಒ ದಾವಿಸಿ ಸಮಸ್ಯೆ ಬಗೆಹರಿಸುವವರೆಗೂ ಅನಿರ್ಧಿಷ್ಟ ಧರಣಿ ನಡೆಸುವುದಾಗಿ ಹೇಳಿದ ಪ್ರತಿಭಟನಾಕಾರರು, ಸಿಇಒ ಬರದಿದ್ದಲ್ಲಿ ಸಮಿತಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಜಿಪಂ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಆ.5ರಂದು ಕೋಲಾರ ಜಿಪಂ ಕಾರ್ಯಾಲಯಕ್ಕೆ ಪಾದಯಾತ್ರೆ ಮೂಲಕ ಹೊರಟು ಅಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಸ್ಥಳಕ್ಕೆ ಮಾಲೂರು ಬಿಇಒ ಸುಬ್ರಮಣ್ಯಂ ಆಗಮಿಸಿ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಸೇನೆ ಜಿಲ್ಲಾಧ್ಯಕ್ಷ ತಿಪ್ಪಸಂದ್ರದ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ವೆಂಕಟೇಶಪ್ಪ, ಗಣೇಶಪ್ಪ, ಮುನಿಯಪ್ಪ, ಚಿನ್ನಯ್ಯ, ಎಸ್‌ಡಿಎಂಸಿ ಸದಸ್ಯರು ಪೋಷಕರು ಭಾಗವಹಿಸಿದ್ದರು.