ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂತಾರಾಜ್ಯ ಕದೀಮ ಅಂದರ್

Rashmi Kasaragodu
Updated On : 6 Aug 2014, 1:17 am

ಗೌರಿಬಿದನೂರು: ದರೋಡೆ ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರಿಗೆ ತಲೆನೋವಾಗಿದ್ದ ಅಂತಾರಾಜ್ಯ ದರೋಡೆಕೋರ ದುರ್ಗಾಪ್ರಸಾದ್ ಅಲಿಯಾಸ್ ಅಶೋಕರಾಜು ಎಂಬಾತನನ್ನು ಬಂಧಿಸುವಲ್ಲಿ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಎರಡು ಕೆಜಿ ಬೆಳ್ಳಿ, 134 ಗ್ರಾಂ ಚಿನ್ನದ ಒಡವೆ, ಎರಡು ಬೈಕ್, ಎರಡು ನಾಡ ಬಂದೂಕು, 1ಲಾಂಗ್, ಒಂದು ಬೀಗ ಒಡೆಯುವ ಕಬ್ಬಿಣದ ರಾಡ್ ಸೇರಿ ಒಟ್ಟು 5ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 11ರ ರಾತ್ರಿ ಗೌರಿಬಿದನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಚಿನ್ನಪ್ಪರೆಡ್ಡಿಹಳ್ಳಿಯ ಒಂಟಿ ಮನೆಗೆ 4 ಜನರ ತಂಡ ಮನೆಯ ಬಾಗಿಲು ಒಡೆದು ಒಳ ನುಗ್ಗಿ, ಮನೆಯಲ್ಲಿದ್ದ ಮಹಿಳೆಯನ್ನು ಕಟ್ಟಿ ಹಾಕಿ ನಗದು, ಬಂಗಾರ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ಜಿಲ್ಲೆಯ ಜನತೆಯಲ್ಲಿ ಭೀತಿ ಮೂಡಿಸಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥನ್, ಡಿಎಸ್ಪಿ ಚಿನ್ನಸ್ವಾಮಿ ಮಾರ್ಗದರ್ಶನದಲ್ಲಿ, ಗೌರಿಬಿದನೂರು ಸಿಪಿಐ ನಾಗರಾಜ್ ನೇತೃತ್ವದಲ್ಲಿ ಎರಡು ತಂಡ ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿತ್ತು. ಜುಲೈ 16ರ ರಾತ್ರಿ ಮುದುಗಾನಕುಂಟೆ ಬಳಿಯ ತೋಟದ ಮನೆಯಲ್ಲಿ ದರೋಡೆಕೋರರಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ಮಧು, ಅಲಿಯಾಸ್ ಮಲ್ಲೆಲ ವೀರಾಂಜನೇಯಲು ಮತ್ತು ಹಿಂದೂಪುರ ವಾಸಿ ರಾಮಾಂಜಿಯನ್ನು ಬಂಧಿಸಲಾಗಿತ್ತು. ಅವರು ನೀಡಿದ ಸುಳಿವಿನ ಮೇರೆಗೆ ಪೆನಗೊಂಡದ ಚಾಕಾರ್ಲಪಲ್ಲಿ ರೈಲ್ವೆ ಸ್ಟೇಷನ್ ಬಳಿ ದುರ್ಗಾಪ್ರಸಾದ್ನನ್ನು ಬಂಧಿಸಿರುವ ಪೊಲೀಸರು ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. 9ವರ್ಷಗಳ ಕಾಲ ಜೈಲಿನಲ್ಲಿದ್ದ ದುರ್ಗಾಪ್ರಸಾದ್ 2002ರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಹಿಂದೂಪುರದಲ್ಲಿ ಸಾರಾಯಿ ಮಾರಾಟ ಮಾಡಿಕೊಂಡಿದ್ದ. 2010ರಲ್ಲಿ ದುರ್ಗಾಪ್ರಸಾದ್, ಮಧು, ಕದಿರಿಗಂಗಣ್ಣ, ಹನುಮಂತ ಸೇರಿ ಆಂಧ್ರಪ್ರದೇಶದ ಸೀಮಕುರ್ತಿ, ವಿಜಯವಾಡ, ಗುಂಟೂರು, ಕನ್ನಿಗಿರಿ, ಅನಂತಪುರ, ತಾಡಪತ್ರಿ, ಕದಿರಿ, ಹಿಂದೂಪುರ ಮತ್ತು ಕರ್ನಾಟಕದ ಬಾಗೇಪಲ್ಲಿ, ಶಿಡ್ಲಘಟ್ಟ, ಮಂಚೇನಹಳ್ಳಿ ಮುಂತಾದ ಕಡೆಗಳಲ್ಲಿ ಮನೆಗಳ್ಳತನ ಮಾಡಿರುವ ಆರೋಪ ಹೊತ್ತಿದ್ದಾರೆ. ಸೀಮಕುರ್ತಿ ಶಾಸಕರ ಮನೆಯಲ್ಲಿ ಕಳವು ಮಾಡುವ ಜೊತೆಗೆ ಆಂಧ್ರಪ್ರದೇಶದಲ್ಲಿ 29 ಡಕಾಯಿತಿ ಮತ್ತು ಕರ್ನಾಟಕದಲ್ಲಿ 8 ಕಡೆ ಡಕಾಯಿತಿ ಮಾಡಿ 2011ರಲ್ಲಿ ದುರ್ಗಾಪ್ರಸಾದ್ ಹಿಂದೂಪುರ ಪೊಲೀಸರಿಗೆ ಸೆರೆಸಿಕ್ಕಿ ಸುಮಾರು 3 ವರ್ಷಗಳ ಕಾಲ ಜೈಲಿನಲ್ಲಿದ್ದ. 2014ರ ಮಾರ್ಚ್ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.
ಕಾರ್ಯಾಚರಣೆಯಲ್ಲಿ ಸಿಪಿಐ ನಾಗರಾಜ್, ಪಿಎಸ್ಐಗಳಾದ ಶಿವಕುಮಾರ್, ಕೃಷ್ಣಪ್ಪ, ಭೈರಾ, ಸುಂದರ್ ಹಾಗೂ ಸಿಬ್ಬಂದಿಯಾದ  ಮುಖ್ಯಪೇದೆ ಖಲೀಲ್, ಪ್ರಬಾಕರ್, ನಜೀರ್ ಅಹ್ಮದ್, ಸೋಮಶೇಖರ್, ರಿಜ್ವಾನ್, ರಾಮಸ್ವಾಮಿ, ಕೃಷ್ಣಪ್ಪ, ಖಲಂದರ್, ರಾಮಕೃಷ್ಣ, ಅರುಣ್, ನಂದಕುಮಾರ್, ನಟರಾಜ್, ಮಂಜುನಾಥ್, ಚಿಕ್ಕಣ್ಣ, ನಾಗೇಶ್, ಶ್ರೀನಿವಾಸ್, ಮಂಜುನಾಥ್, ಗೋಪಿ ಮತ್ತು ಜೀಪ್ ಚಾಲಕರಾದ ಚಂದ್ರಶೇಖರ್, ಮಹೇಶ್, ನಾರಾಯಣಸ್ವಾಮಿ, ಸಿರಾಜ್ ಮುಂತಾದವರು ಪಾಲ್ಗೊಂಡಿದ್ದರು.

ಕಳವಿನ ಮನೆತನದ ಹಿನ್ನೆಲೆ
ದುರ್ಗಾ ಪ್ರಸಾದ್ನ ತಂದೆ ರಾಮಪ್ಪನಿಗೆ ಇಬ್ಬರು ಹೆಂಡತಿಯರಿದ್ದು, ಒಟ್ಟು 12 ಮಂದಿ ಮಕ್ಕಳು. ಇವರೆಲ್ಲರೂ ಡಕಾಯಿತಿ ಮಾಡುವುದರಲ್ಲಿ ನಿಸ್ಸೀಮರು ಎನ್ನಲಾಗಿದೆ.
1992ರಲ್ಲಿ ಸುಮಾರು 35 ಮನೆ ಡಕಾಯಿತಿ ಮಾಡಿದ ಆರೋಪದ ಮೇಲೆ ಈತನನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ಜೈಲಿನಿಂದ ನ್ಯಾಯಾಲಯಕ್ಕೆ ಹೋಗುವಾಗ ಶಿರಾ ಬಳಿಯ ಹೋಟೆಲ್ವೊಂದರಲ್ಲಿ ಊಟ ಮಾಡಲು ವಾಹನ ನಿಲ್ಲಿಸಿದ್ದಾಗ ತಪ್ಪಿಸಿಕೊಂಡಿದ್ದ  ದುರ್ಗಾಪ್ರಸಾದ್ ಮತ್ತು ಆತನ ಸಹೋದರ ಮಲ್ಲಿಕಾರ್ಜುನ್ 3 ತಿಂಗಳ ನಂತರ ರಾಯಚೋಟಿಯ ಪಾಳ್ಯಂಗಡ್ಡದಲ್ಲಿ ಆಗಿನ ಸಿಪಿಐ ಎಂ. ಪ್ರಭಾಕರ್ ದಸ್ತಗಿರಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement