ಅಗತ್ಯ ಸೌಲಭ್ಯ ಕಲ್ಪಿಸಲು ರೈಲ್ವೆ ಸಚಿವರಿಗೆ ಮನವಿ
ಕೆಜಿಎಫ್: ನಗರದಲ್ಲಿರುವ ವಿವಿಧ ರೈಲ್ವೆ ನಿಲ್ದಾಣಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಮತ್ತು ಮಾರಿಕುಪ್ಪಂ-ಕುಪ್ಪಂ ರೈಲು ಸಂಪರ್ಕಕ್ಕೆ ನೂತನ ಮಾರ್ಗಕ್ಕೆ ಚಾಲನೆ ನೀಡಬೇಕು ಎಂದು ಕೋರಿ ಮಾಜಿ ಶಾಸಕ ವೈ. ಸಂಪಂಗಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ರೈಲ್ವೆ ಸಚಿವ ಸದಾನಂದಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
30 ಸಾವಿರಕ್ಕೂ ಹೆಚ್ಚು ಕಾರ್ಮಿಕರು, ಮಹಿಳೆಯರು ವಿದ್ಯಾರ್ಥಿಗಳು ಯುವಕರು ಗ್ರಾಮಸ್ಥರು ಕೆಜಿಎಫ್ನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದು, ಅವರಿಗೆ ಕೋರಮಂಡಲ್, ಮಾರಿಕುಪ್ಪಂ, ಉರಿಗಾಂ, ಚಾಂಪಿಯನ್ರೀಫ್, ಬೆಮೆಲ್ನಗರದ ರೈಲ್ವೆ ನಿಲ್ದಾಣಗಳಲ್ಲಿ ಆಗತ್ಯ ಸೌಕರ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಕುಡಿಯುವ ನೀರು, ಶೌಚಾಲಯ, ಫ್ಲಾಟ್ಫಾರಂ ದುರಸ್ತಿ, ತಂಗುದಾಣ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಭರವಸೆ: ಮನವಿ ಸ್ವೀಕರಿಸಿದ ಸದಾನಂದಗೌಡರು, ಆದ್ಯತೆ ಮೇರೆಗೆ ಅಲ್ಲಿನ ಜನತೆಯ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ವಿಜಯಶಂಕರ್, ಮುನಿಸ್ವಾಮಿರೆಡ್ಡಿ, ಅಮರೇಂದ್ರ ಮೌನಿ, ವಕೀಲರಾದ ರಘುಪತಿ, ಸತೀಶ್, ಯಶ್ವಂತ ರಾಜ್ ಭಾಗವಹಿಸಿದ್ದರು.