ಅರ್ಥಪೂರ್ಣ ಸ್ವಾತಂತ್ರ್ಯೋತ್ಸವಕ್ಕೆ ನಿರ್ಧಾರ
ಗುಡಿಬಂಡೆ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದಲ್ಲಿ ಆ. 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಮಾರಂಭವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ನಂಜಪ್ಪ, ಪಟ್ಟಣದ ಪ.ಪೂ. ಕಾಲೇಜು ಆವರಣದ ಕ್ರೀಡಾಂಗಣದಲ್ಲಿ ಸುಸಜ್ಜಿತ ವೇದಿಕೆ ನಿರ್ಮಿಸಿ ಶಾಮಿಯಾನ, ಅಸನಗಳ ವ್ಯವಸ್ಥೆ ಕಲ್ಪಿಸಿ ಸುಸೂತ್ರವಾಗಿ ಸಮಾರಂಭ ನಡೆಯಲು ಅನುವು ಮಾಡಿಕೊಳ್ಳಲಾಗುವುದೆಂದರು. ಸಮಾರಂಭಕ್ಕೆ ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಹಾಜರಾಗಬೇಕು. ಪಟ್ಟಣದ ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡಬೇಕೆಂದರು. ಸಭೆಯಲ್ಲಿ ಬಿಇಒ ವೆಂಕಟರವಣಪ್ಪ, ನೌಕರರ ಸಂಘದ ಕೆ.ವಿ. ನಾರಾಯಣ ಸ್ವಾಮಿ, ಪ್ರ. ಕಾರ್ಯದರ್ಶಿ ಮುನಿಕೃಷ್ಣ, ಶಿಕ್ಷಕರ ಸಂಘದ ಶ್ರೀರಾಮಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವ ಪ್ರಕಾಶ್ ಮತ್ತಿತರರಿದ್ದರು.