ಆತ್ಮಹತ್ಯೆ ಯತ್ನ: ಬಾಲಕಿ ಸಾವು
ಚಿಂತಾಮಣಿ: ಕುಟುಂಬ ಕಲಹದಿಂದ ತಾಯಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪರಿಣಾಮ, ಮಗುವೊಂದು ಸಾವನ್ನಪ್ಪಿ, ತಾಯಿ ಮತ್ತೊಂದು ಮಗು ಚಿಂತಾಜನಕವಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ.ತಾಲೂಕಿನ ಮೈಲಾಪುರ ಗ್ರಾಮದ ನಾಗೇಶ್ ಎಂಬವರ ಪತ್ನಿ ದೇವರತ್ನಮ್ಮ ಎಂಬಿಬ್ಬರ ಕುಟುಂಬ ಕಲಹದಿಂದ ಬೇಸತ್ತಿದ್ದರು. ಸೋಮವಾರ ಸಂಜೆ ದೇವರತ್ನಮ್ಮ ಮಕ್ಕಳಾದ ವಿಕೃತಿ(4), ಪಾವನಿ(7 ತಿಂಗಳು) ಈ ಮೂವರು ಚೆಕ್ಡ್ಯಾಂನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಪಾವನಿ ಸಾವನ್ನಪ್ಪಿದ್ದಾಳೆ. ತಕ್ಷಣ ನೆರೆಹೊರೆಯರ ಸಹಕಾರದಿಂದ ತಾಯಿ ದೇವರತ್ನಮ್ಮ ಮತ್ತೊಬ್ಬ ಮಗಳಾದ ವಿಕೃತಿಯನ್ನು ರಕ್ಷಿಸಿ ಕೂಡಲೇ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಕಳುಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಂ.ಆರ್.ನಟರಾಜ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮರದಿಂದ ಬಿದ್ದು ಗಾಯ
ಚಿಂತಾಮಣಿ: ತಾಲೂಕಿನ ವೇಂಪಲ್ಲಿ ಗ್ರಾಮದ ರೈತ ಮಲ್ಲಪ್ಪರೆಡ್ಡಿ ಹೊರವಲಯದಲ್ಲಿರುವ ಮರವೊಂದರಲ್ಲಿ ಮೇಕೆಗಳ ಮೇವಿಗಾಗಿ ಮರಹತ್ತಿ ರೆಂಬೆಗಳನ್ನು ಕೀಳುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಮರದಿಂದ ಕೆಳಗೆ ಬಿದ್ದು ಸೊಂಟ ಮುರಿದುಕೊಂಡಿದ್ದಾನೆ. ತಕ್ಷಣ ಬಟ್ಲಹಳ್ಳಿ ಗ್ರಾಮದ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಮಿಗಳ ಮದುವೆಗೆ ಅಡ್ಡಿ
ಚಿಂತಾಮಣಿ: ತಾಲೂಕಿನ ಕೋಟಗಲ್ ಗ್ರಾಮದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕ, ಯುವತಿ ಕಳೆದ ಹಲವು ತಿಂಗಳಿಂದ ಪರಸ್ಪರ ಪ್ರೀತಿಸಿದ್ದರು. ಪೋಷಕರಿಗೆ ತಿಳಿಸದೆ ಇಬ್ಬರೂ ದೇವಾಲಯವೊಂದರಲ್ಲಿ ವಿವಾಹ ಮಾಡಿಕೊಂಡರು. ನಂತರ ಗ್ರಾಮಕ್ಕೆ ಬಂದಾಗ ಯುವತಿ ತಂದೆ ಇದಕ್ಕೆ ವಿರೋಧಪಡಿಸಿದ್ದಾರೆ. ಒಂದೇ ಸಮುದಾಯಕ್ಕೆ ಸೇರಿದ 2 ಕಡೆಯ ಮುಖಂಡರು ಪರಿಸ್ಪರ ನ್ಯಾಯ ಪಂಚಾಯ್ತಿ ಮಾಡಿದರೂ ವಿರೋಧ ವ್ಯಕ್ತಪಡಿಸಿದ ಯುವತಿಯ ತಂದೆ, ಕಡೆಗೂ ತನ್ನ ಮಗಳು ಅಪ್ರಾಪ್ತಳು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಸಿಎಂ ಹಾಸ್ಟೆಲ್ಗೆ ಶಾಸಕರ ಭೇಟಿ
ಮಾಲೂರು: ಇಲ್ಲಿನ ಬಿಸಿಎಂ ಹಾಸ್ಟೆಲ್ ಗೋಡೌನ್ಗೆ ಶಾಸಕ ಮಂಜುನಾಥ್ ಗೌಡ ಮಂಗಳವಾರ ಭೇಟಿ ನೀಡಿ ವಿತರಿಸಲು ಸಿದ್ಧವಾಗಿದ್ದ ಆಹಾರ ಪದಾರ್ಥಗಳ ದಾಸ್ತಾನು ಪರಿಶೀಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕರು, ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು. ಗುಣಮಟ್ಟದ ಕೊರತೆ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು. ಹಾಸ್ಟೆಲ್ ಅಡುಗೆ ಮನೆ ಹಾಗೂ ಶೌಚಾಲಯಗಳನ್ನು ವೀಕ್ಷಿಸಿದ ಶಾಸಕರು ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಸಿಎಂ ಅಧಿಕಾರಿ ಸಂಕೇಗೌಡ, ವಾರ್ಡ್ನ್, ಸುಮಿತ್ರ, ನಾರಾಯಣಪ್ಪ ಇದ್ದರು.