ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ
ಮಾಲೂರು: ಪಟ್ಟಣದಲ್ಲಿ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಮಂಜುನಾಥ್ ಗೌಡ ಮಂಗಳವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಮೊದಲ ಹಂತದಲ್ಲಿ 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡುತ್ತಿದ್ದು, ಗುಣಮಟ್ಟ ನಿಗಾವನ್ನು ಆಯಾ ವಾರ್ಡ್ ನಿವಾಸಿಗಳೇ ತೆಗೆದುಕೊಳ್ಳಬೇಕು. ಕಾಮಗಾರಿಯಲ್ಲಿ ಲೋಪ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಗುತ್ತಿಗೆದಾರನಿಗೆ ಬಿಲ್ ಪಾಸ್ ಆಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ರಸ್ತೆಗೆ ಶಾಸಕರ ನಿಧಿಯಿಂದ 20 ಲಕ್ಷ ನೀಡುತ್ತಿರುವುದಾಗಿ ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಭಾರತಮ್ಮ ನಂಜುಂಡಪ್ಪ, ಉಪಾಧ್ಯಕ್ಷೆ ಶ್ರೀವಲ್ಲಿ, ಮುಖ್ಯಾಧಿಕಾರಿ ರೇಣುಕಾ, ಅಭಿಯಂತರ ಮಂಜುನಾಥ್, ಪುರಸಭೆ ಸದಸ್ಯ ಅಲೂಮಂಜು, ಲಿಂಗೇಶ್, ಜಾಕೀರ್ ಖಾನ್ ಇದ್ದರು.