ಬೀದಿಕಾಮಣ್ಣರಿಂದ ರಕ್ಷಣೆ ನೀಡಿ
ಚಿಂತಾಮಣಿ: ಕಾಲೇಜು ವಿದ್ಯಾರ್ಥಿಗಳಿಗೆ ದಿನನಿತ್ಯ ಕಿರಿಕಿರಿ ಉಂಟುಮಾಡುತ್ತಿರುವ ರಸ್ತೆ ಬದಿಯ ಹಲವು ತ್ರಿಚಕ್ರ ಹಾಗೂ ಟೆಂಪೋ ಬೀದಿಕಾಮಣ್ಣರಿಂದ ರಕ್ಷಣೆ ನೀಡಲು ಒತ್ತಾಯಿಸಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ನಗರದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.
ನಗರದ ಗುರುಭವನ ಮುಂಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದಿನನಿತ್ಯ ಗುರುಭವನ ಪಕ್ಕದ ರಸ್ತೆ ಹಾಗೂ ಭಾಗ್ಯಲಕ್ಷ್ಮಿ ಕಲ್ಯಾಣ ಮಂಟಪದ ರಸ್ತೆ, ಪೆಟ್ರೋಲ್ ಬಂಕ್ ಮುಂದೆಯಲ್ಲಿ ತ್ರಿಚಕ್ರ ಹಾಗೂ ಟೆಂಪೋ ಚಾಲಕರು ವಿನಾಕಾರಣ ವಾಹನಗಳನ್ನು ನಿಲ್ಲಿಸಿಕೊಂಡು ವಿದ್ಯಾರ್ಥಿನಿಯರನ್ನು ನೋಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪಿಸಿದರು. ನಂತರ ನಗರ ಠಾಣೆ ವೃತ್ತ ನಿರೀಕ್ಷಕ ನಂಜಪ್ಪನವರಿಗೆ ಮನವಿ ಪತ್ರವನ್ನು ನೀಡಿದರು.
ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿದ ವೃತ್ತ ನಿರೀಕ್ಷಕ ನಂಜಪ್ಪ, ವಿದ್ಯಾರ್ಥಿನಿಯರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕಾಲೇಜಿನ ಸುತ್ತಮುತ್ತ ರಸ್ತೆಗಳಲ್ಲಿ ಪೊಲೀಸ್ ಪೇದೆಯರನ್ನು ನೇಮಿಸಲಾಗುವುದು. ವಿದ್ಯಾರ್ಥಿನಿಯರಿಗೆ ಕಾನೂನು ರಕ್ಷಣೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಮೇಘಮಾಲ, ಅರ್ಚನಾ, ಅಮೃತ, ಪಾರ್ವತಿ, ಭಾರತಿ, ಮಮತ, ಗಾಯಿತ್ರಿ, ಶಾಲಿನಿ, ನಂದಿತ, ಸರಸ್ವತಿ ಮತ್ತಿತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.