ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪಾಯಕಾರಿ ಮಾರ್ವೇ ಮೀನು ಸಾಕಣೆಗೆ ಇಲ್ಲ ಅಡ್ಡಿ

Rashmi Kasaragodu
Updated On : 2 Feb 2014, 1:21 am

ಎನ್. ಬಾಬು
ಚಿಂತಾಮಣಿ: ಮಾರ್ವೇ ಮೀನುಗಳನ್ನು ಸರ್ಕಾರ ಸಾಕಾಣಿಕೆ ಮತ್ತು ಮಾರಾಟ ನಿಷೇದಿಸಿದ್ದರೂ, ತಾಲ್ಲೂಕು ಆಡಳಿತ ಯಂತ್ರಾಂಗ ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಚಿನ್ನಸಂದ್ರ ಹಾಗೂ ಕೆಂದನಹಳ್ಳಿ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಎಗ್ಗಿಲ್ಲದಂತೆ ರಾಜಾರೋಷವಾಗಿ ಮಾರ್ವೇ ಮೀನು ಮರಿಗಳ ಸಾಕಾಣಿಕೆ ಮತ್ತು ಮಾರಾಟ ನಡೆಯುತ್ತಿದ್ದರೂ ಸ್ಥಳೀಯ ತಾಲೂಕು ದಂಡಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸದೇ ಇರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಹಲವು ದಿನಗಳಿಂದ ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ತಾಲೂಕು ವ್ಯಾಪ್ತಿಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಮೀನುಗಳಿಗೆ ಸತ್ತ ಹುಳು, ನಾಯಿ ಮತ್ತು ಕೋಳಿಯ ಬಿಡಿ ಭಾಗಗಳನ್ನು ಹಾಕಿ ಸಾಕಾಣಿಕೆ ಮಾಡುತ್ತಿರುವುದರಿಂದ ದುರ್ವಾಸನೆ ಮತ್ತು ಪರಿಸರದ ಮೇಲೆ ಕೆಟ್ಟ ಗಾಳಿ ಬೀಸಿ ಜನರು ವಿವಿಧ ರೋಗ ಭೀತಿಯಲ್ಲಿದ್ದಾರೆ.
ಮಾರ್ವೇ ಮೀನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾಕಾಣಿಕೆ ಮತ್ತು ಮಾರಾಟ ನಿಷೇಧಿಸಿದ್ದರೂ ಅಧಿಕಾರಿಗಳ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಮಾರಾಟ ದಂಧೆ ನಡೆಯುತ್ತಿದೆ. ಮಾರ್ವೇ ಮೀನುಗಳನ್ನು ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಮೀನು ಕತ್ತರಿಸಿ ಅದರ ತ್ಯಾಜ್ಯವನ್ನು ಎಲ್ಲಂದರಲ್ಲೇ ಬಿಸಾಡಲಾಗುತ್ತಿದೆ. ಪರಿಣಾಮ ಬೀದಿ ನಾಯಿಗಳು ಇವುಗಳನ್ನು ತಿನ್ನಲು ಗುಂಪು ಗುಂಪುಗಟ್ಟಿರುತ್ತವೆ. ಇದರಿಂದ ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡಲು ಬೀತರಾಗಿದ್ದು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿನಿತ್ಯ ನಡೆಯುವ ಅಕ್ರಮ ಮೀನುಗಾರಿಕೆ ಮಾರಾಟ ಮತ್ತು ಸಾಕಾಣಿಕೆ ದಂಧೆಗೆ ಕಡಿವಾಣ ಹಾಕಲು ವಿಫಲಗೊಂಡಿದ್ದಾರೆಂದು ನಾಗರೀಕರು ಆರೋಪಿಸಿದ್ದಾರೆ. ಈ ಹಿಂದೆ ಪರರಾಜ್ಯ ಲಾರಿಯೊಂದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದನ್ನು ಬಿಟ್ಟರೆ ಮಾರ್ವೇ ಮೀನಿನ ಸಾಕಾಣಿಕೆ ಅಥವಾ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅತಿ ಕ್ರೂರಿಯಾದ ಈ ಮೀನುಗಳನ್ನು ಸಾಕಾಣಿಕೆ ಮಾಡುತ್ತಿರುವುದನ್ನು ನಿಯಂತ್ರಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈಗಲಾದರೂ ಈ ಮೀನುಗಳ ಸಾಕಾಣಿಕೆ ಕಡಿವಾಣಕ್ಕೆ ಮುಂದಾಗುವರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement