ಗಮನ ಸೆಳೆದ ವಸ್ತು ಪ್ರದರ್ಶನ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಶಾಲಾ ಮಕ್ಕಳು ತಯಾರಿಸಿದ್ದ ಪಂಚಮಹಲ್, ಸಾಂಚಿಸ್ಥೂಪ, ಕುತುಬ್ಮಿನಾರ್, ತಾಜಮಹಲ್ ಮೊದಲಾದ ಪುರಾತನ ಕಟ್ಟಡಗಳ ರೂಪಕಗಳು ನೋಡುಗರ ಗಮನ ಸೆಳೆಯಿತು. ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ್, ವಿದ್ಯಾರ್ಥಿಗಳು ಅಕ್ಷರಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಪಠ್ಯೇತರ ವಿಷಯಗಳಲ್ಲೂ ಮಕ್ಕಳು ಪರಿಣಿತರಾಗಬೇಕು ಎಂದರು. ಬಿಇಎಲ್ ನಿವೃತ್ತ ಅಧಿಕಾರಿ ಕೃಷ್ಣಮೂತಿ ಮಾತನಾಡಿ, ಪ್ರೋತ್ಸಾಹದ ಕೊರತೆಯಿಂದ ಮಕ್ಕಳು ತಮ್ಮ ಪ್ರತಿಭೆ ಹೊರತರಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರತಿಭೆ ಗುರ್ತಿಸುವ ಕೆಲಸ ಮಾಡಬೇಕು ಎಂದರು. ಪಟ್ಟಣದ ಸರ್ಕಾರಿ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಿ ಮಾಹಿತಿ ಪಡೆದರು.