ಜಾನಪದ ಕಲೆ ಮುಂದಿನ ಪೀಳಿಗೆಗೆ ಉಳಿಸಬೇಕು
ಕೋಲಾರ: ಜಾನಪದ ಕಲೆಗಳು ಸಂಸ್ಕೃತಿ ಉಳಿವೆ ಪೂರಕವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ಇಂದಿನ ಯುವಜನಾಂಗದ ಕೆಲಸ ಎಂದು ಚಿತ್ರಕಲಾವಿದ ಎ.ಆರ್. ರಮೇಶ್ ಅಭಿಪ್ರಾಯಪಟ್ಟರು. ಅವರು ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಜಾನಪದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಿಕರು ಉಳಿಸಿಕೊಂಡು ಬಂದ ಕಲೆಗಳನ್ನು ನಾವು ಇಂದು ಮರೆಯುತ್ತಿರುವುದು ವಿಷಾಧಕರ. ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ನಿಧಾನವಾಗಿ ನಶಿಸುವತ್ತ ಸಾಗುತ್ತಿವೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯೇ ನಾಶವಾಗಲಿದೆ ಎಂಬ ಸೂಚನೆಗಳು ಕಾಣುತ್ತಿವೆ. ಯುವಕರು ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಎಚ್. ಹನುಮಂತಪ್ಪ, ಈ ನೆಲ ಈ ಜಲ ವೆಂಕಟಾಚಲಪತಿ, ತಮಟೆ ಮಂಜು, ಕೆ. ಗೌತಮ್ ಇದ್ದರು.