ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕೆಜಿಎಫ್: ಕ್ಷೇತ್ರದ ಪಾರಂಡಹಳ್ಳಿ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವಾರು ಹೋರಾಟ ನಡೆಸಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರದ ಜನಪ್ರತಿನಿಧಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಕರವೇ ರಸ್ತೆತಡೆ ಪ್ರತಿಭಟನೆ ನಡೆಸಿದರು. ನಗರದಿಂದ ಪಾರಂಡಹಳ್ಳಿ ಗ್ರಾಮದ ಮೂಲಕ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಿಗೆ ಹೋಗುವ ವಾಹನಗಳು ಈ ರಸ್ತೆಯ ಮೂಲಕವೇ ಹೋಗಬೇಕಾಗಿದ್ದು ಇಂತಹ ಹದೆಗೆಟ್ಟಿರುವ ರಸ್ತೆಗಳಿಂದ ಪ್ರತಿನಿತ್ಯ ವಾಹನ ಚಾಲಕರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ತೊಂದರೆಯಾಗುತ್ತಿದ್ದು ಅಲ್ಲದೆ ವಾಹನಗಳ ಓಡಾಟದಿಂದ ಮಣ್ಣಿನ ಧೂಳು ಹರಡಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. ರಾಬರ್ಟ್ಸನ್ಪೇಟೆ ಠಾಣೆ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ ಅವರಿಗೆ ಮನವಿ ಸಲ್ಲಿಸಿದರು.