ವಾಸವಿ ಋಷಿಗೋತ್ರ ಹೋಮ
ಚಿಕ್ಕಬಳ್ಳಾಪುರ; ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಅಮ್ಮನವರು ಅಗ್ನಿಪ್ರವೇಶ ಮಾಡಿದ ದಿನದ ಅಂಗವಾಗಿ ಶನಿವಾರ ನಗರದ ಶ್ರೀ ಪೇಟೆ ಆಂಜನೇಯ ದೇವಾಲಯದಲ್ಲಿ ಶ್ರೀ ವಾಸವಿ ಋಷಿಗೋತ್ರ ಹೋಮ ಮತ್ತು ಅಷ್ಟ ಶೇಷಾಧಿನಾಗಾರಾಧನೆಯ ಮಹಾಯಾಗ ನಡೆಯಿತು. ಆರ್ಯವೈಶ್ಯ ಮಂಡಳಿ ಮತ್ತು ವಾಸವಿ ಅಗ್ನಿ ಪ್ರವೇಶ ಸೇವಾ ಸಮಿತಿಯು ಲೋಕ ಕಲ್ಯಾಣಾರ್ಥವಾಗಿ ಹಾಗೂ ನಾಗದೋಷ ನಿವಾರಣೆಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 100ಕ್ಕೂ ಅಧಿಕ ದಂಪತಿಗಳು ಶೇಷಾಧಿನಾಗಾರಾಧನೆಯ ಮಹಾಯಾಗದಲ್ಲಿ ಪಾಲ್ಗೊಂಡಿದ್ದರು. ವಾಸವಿ ಋಷಿಗೋತ್ರ ಹೋಮ ಮತ್ತು ಶೇಷಾಧಿನಾಗಾರಾಧನೆಯ ಮಹಾಯಾಗವನ್ನು ಅಮೆರಿಕಾದ ಚಿಕಾಗೋವಿನ ಎರ್ರಜಡ್ಲ ಶ್ರೀನಿವಾಸಾಚಾರ್, ತಿರುಮಲ ತಿರುಪತಿ ಪ್ರಧಾನ ಅರ್ಚಕ ವೈ.ಎನ್. ಕೋದಂಡರಾಮಾಚಾರ್ ಮತ್ತು ಕೃಷ್ಣಮಾಚಾರ್ ಪೂಜಾ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿಯ ಡಿ.ಎಸ್. ನಂಜುಂಡರಾಮಶೆಟ್ಟಿ, ಅಗ್ನಿಪ್ರವೇಶ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಶ್ರೀಧರ್, ಪಿ.ಆರ್.ಪ್ರಕಾಶ್, ನಾಗೇಶ್, ಬಾಂಬೆ ಸುರೇಶ್ ಇದ್ದರು.