ಬೂರಗಮಾಕಲಹಳ್ಳಿ ಶಾಲೆಯಲ್ಲಿ ಅಚ್ಚಕನ್ನಡ-ಸ್ವಚ್ಛ ಕನ್ನಡ ಕಾರ್ಯಕ್ರಮ
ಚಿಂತಾಮಣಿ: ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ತಾಲೂಕಿನ ಬೂರಗಮಾಕಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲೆಯ ಅಂಗಳದಲ್ಲಿ ಕವಿ-ಕಾವ್ಯ ಹಾಗೂ ಅಚ್ಚಕನ್ನಡ-ಸ್ವಚ್ಛ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪರಿಸರ ಮಾಲಿನ್ಯ, ವರದಕ್ಷಿಣೆ ವಿಷಯ ಕುರಿತು ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ ಮಾತನಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ಕೆಲವು ವಿದ್ಯಾರ್ಥಿಗಳು ಕುವೆಂಪು, ಡಿವಿಜಿ, ದ.ರಾ. ಬೇಂದ್ರೆ, ಪಂಪ, ಕನಕದಾಸ, ಜಿ.ಎಸ್. ಶಿವರುದ್ರಪ್ಪ ಮುಂತಾದವರ ಬದುಕು-ಬರಹ ಕುರಿತು ಮಾತನಾಡುವ ಮೂಲಕ ಕನ್ನಡ ಕಾವ್ಯ ಲೋಕದ ದಿಗ್ಗಜರಿಗೆ ನುಡಿ ನಮನ ಸಲ್ಲಿಸಿದರು. ಮತ್ತೆ ಕೆಲವರು ಸ್ವರಚಿತ ಚುಟುಕುಗಳನ್ನು ವಾಚಿಸಿ ಎಲ್ಲರ ಗಮನ ಸೆಳೆದರಲ್ಲದೆ, ಪವಿತ್ರ ಭಗವದ್ಗೀತೆ ಹಾಗೂ ಕುರಾನ್ ಗ್ರಂಥಗಳ ಹಲವು ಶ್ಲೋಕಗಳನ್ನು ಪಠಿಸಿದರು.
ಶಾಲೆಯ ಅಂಗಳದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಆರ್. ನಾರಾಯಣರೆಡ್ಡಿ ಮಾತನಾಡಿ, ಕನ್ನಡ ನಾಡು-ನುಡಿಗಳ ಸಂರಕ್ಷಣೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವೆಂದು ತಿಳಿಸಿದರು. ಚು.ಸಾ.ಪ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಪ್ರಾಸ್ತಾವಿಕ ಭಾಷಣ ಮಾಡಿದರು. ಜನಪದ ಗಾಯಕ ಸ್ವಾರಪ್ಪಲ್ಲಿ ಚಂದ್ರಶೇಖರ್ ಇದ್ದರು.