ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹಿಳೆಯರಿಗೆ ಶಿಕ್ಷಣದಿಂದ ಸಮಸ್ಯೆಗಳಿಗೆ ಮುಕ್ತಿ

Rashmi Kasaragodu
Updated On : 3 Feb 2014, 1:07 am

ಕೋಲಾರ: ಸಮಸ್ಯೆಗಳಿಂದ ಮುಕ್ತಿ ಹೊಂದಲು ಮಹಿಳೆಯರು ಕಡ್ಡಾಯ ಶಿಕ್ಷಣ ಪಡೆಯುವ ಮೂಲಕ ಸ್ವಾಭಿಮಾನಿಗಳಾಗಿ ಬಾಳ್ವೆ ಮಾಡುವುದಕ್ಕೆ ಪ್ರಯತ್ನಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮೀ ತಿಳಿಸಿದರು.
ಎಸ್ಎಫ್ಐ 13ನೇ ರಾಜ್ಯ ಸಮ್ಮೇಳನ ಹಾಗೂ ಮಹಿಳಾ ಶಿಕ್ಷಣದ ಹೋರಾಟಗಾರ್ತಿ ಸಾವಿತ್ರಿ ಬಾಪುಲೆರವರ ಸ್ಮರಣಾರ್ಥವಾಗಿ ಕೋಲಾರದ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಣ ಮತ್ತು ಮಹಿಳೆ ಎಂಬ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಪುರೋಹಿತ ಶಾಹಿ ವ್ಯವಸ್ಥೆಯನ್ನು ದಿಕ್ಕರಿಸಿ ಮಹಿಳೆಯರಿಗೆ, ವಿಧುವೆಯರಿಗೆ ಮತ್ತು ತುಳಿತಕ್ಕೊಳಗಾದ ಸಮುದಾಯದ ಜನತೆಯನ್ನು ಮೇಲೆತ್ತಲು ಸಾವಿತ್ರಿ ಬಾಪುಲೆ ಶ್ರಮಿಸಿದ್ದಾರೆ. ಪ್ರಗತಿಪರರಿಗೆ ಆದರ್ಶವಾಗಿದ್ದಾರೆ. ಆದ್ದರಿಂದ ದೌರ್ಜನ್ಯ ಮುಕ್ತ ಬದುಕಿಗಾಗಿ ಮಹಿಳೆಯರು ಶಿಕ್ಷಣ ಪಡೆದು ಸಾಮಾಜಿಕ ಪರಿವರ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಎಸ್ಎಫ್ಐ ರಾಜ್ಯ ಸಹಕಾರ್ಯದರ್ಶಿ ದಿವ್ಯ ಮಾತನಾಡಿ, ವ್ಯವಸ್ಥಿತವಾಗಿ ಮಹಿಳೆಯರ ಧ್ವನಿ ಅಡಗಿಸಲು ಮೂಲಭೂತವಾದಿಗಳು ಮೂಢನಂಬಿಕೆ ಮತ್ತು ಅಪನಂಬಿಕೆಗಳಿಂದ ಶೋಷಣೆ ಮಾಡುತ್ತಿದ್ದಾರೆ. ದೇಶದಲ್ಲಿ ಇನ್ನು ಶೇ.35 ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಹಾಗೂ ಸರಾಸರಿ ಕೇವಲ ಶೇ.3 ರಷ್ಟು ಹೆಣ್ಣು ಮಕ್ಕಳು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದು, ಶೇ.97 ರಷ್ಟು ಮಂದಿ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದರು. ಜೆಎಂಎಸ್ ರಾಜ್ಯಾಧ್ಯಕ್ಷ ವಿ. ಗೀತಾ ಮಾತನಾಡಿ, ಮಹಿಳೆ ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಸ್ವಾಭೀಮಾನದಿಂದ ತನ್ನ ಮೇಲಿನ ದೌರ್ಜನ್ಯವನ್ನು ಪ್ರತಿರೋಧಿಸಲು ಸಾಧ್ಯ ಮತ್ತು ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಸರಕುಗಳ ಮಾರಾಟಕ್ಕಾಗಿ ಮಹಿಳೆಯರನ್ನು ಅರೆನಗ್ನವಾಗಿ ಜಾಹೀರಾತುಗಳಲ್ಲಿ ನೀಡುತ್ತಿದ್ದಾರೆ. ಇದರಿಂದ ಶಿಕ್ಷಣದ ಖಾಸಗೀಕರಣದಿಂದ ಮಹಿಳೆ ವಂಚಿತವಾಗಿದ್ದು, ಹೆಣ್ಣು ಮಕ್ಕಳು ಓದುವ ಶಾಲಾ ಕಾಲೇಜುಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎಸ್.ವಿ. ನಂದವಾಡಗಿ ವಹಿಸಿದ್ದರು. ಎಸ್.ಎಫ್.ಐ. ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ಕಾಲೇಜಿನ ಸಹಪ್ರಾಧ್ಯಾಪಕ ಎಚ್.ಎನ್. ಶ್ರೀನಿವಾಸಯ್ಯ,, ಮುನಿರತ್ನಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement