ಸ್ವಾವಲಂಬಿ ಬದುಕಿಗೆ ಶಿಕ್ಷಣ ಅಗತ್ಯ: ಕೆ. ಶ್ರೀನಿವಾಸ್ ಅಭಿಮತ
ಕೋಲಾರ: ಸ್ವಾವಲಂಬಿ ಬದುಕಿಗಾಗಿ ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯವನ್ನು ಪಡೆದಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಕೆ. ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ನೂತನ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಘಟಕ, ಆಪ್ತ ಸಲಹಾ ಕೇಂದ್ರದಡಿ ನಡೆದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಎಸ್ಎಸ್ಎಲ್ಸಿ ನಂತರ ಮುಂದೇನು ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ, ಪಠ್ಯಕ್ಕೆ ಮಾತ್ರ ಶಿಕ್ಷಣ ಸೀಮಿತವಾಗದಿರಿಲಿ. ಕೇವಲ ಅಂಕ ಗಳಿಕೆಯೊಂದೇ ಸಾಧನೆಯಲ್ಲ, ವಿವಿಧ ಕೌಶಲ್ಯ ಪಡೆಯಬೇಕು, ಸಮಾಜದಲ್ಲಿ ಬದುಕಿಗೂ ಆಸರೆ ಪಡೆಯಲು ಗಮನ ಹರಿಸಬೇಕೆಂದರು. ನರಸಾಪುರ ಕೈಗಾರಿಕಾ ವಲಯದಲ್ಲಿ ಬೃಹತ್ ಕೈಗಾರಿಕೆಗಳು ಬಂದಿವೆ, ಇಲ್ಲಿ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭ್ಯವಾಗಿದೆ ಎಂದರು. ಡಯಟ್ ಉಪನ್ಯಾಸಕ ಮಾಗಡಯ್ಯ, ಇಂದು ಕೇವಲ ಪಾಸಾದರೆ ಸಾಕು ಎಂದು ಕೂರುವಂತಿಲ್ಲ, ಉತ್ತಮ ಅಂಕ ಗಳಿಸಿದರೆ ಮಾತ್ರವೇ ಬದುಕಿನಲ್ಲಿ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವುದಕ್ಕೆ ಸಾಧ್ಯವೆಂದರು. ಸರ್ಕಾರ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ್ಯಭರಿತ ತರಬೇತಿ ನೀಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನ ಪಡೆದುಕೊಂಡು ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.