ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

7ರಂದು ರಾಜ್ಯಾದ್ಯಂತ ಪ್ರತಿಭಟನೆ

Rashmi Kasaragodu
Updated On : 4 Feb 2014, 1:40 am

ಕ.ಪ್ರ. ವಾರ್ತೆ    ಕೋಲಾರ    ಫೆ 3
ರಾಜ್ಯ ಸರ್ಕಾರ ರೈತರ ಹಾಗೂ ಕೂಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವುದರಿಂದ ರಾಜ್ಯಾಧ್ಯಂತ ಫೆ.7 ರಂದು ಎಲ್ಲಾ ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಹಾಗೂ ಕೂಲಿ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಹಲವು ಬಾರಿ ಗಡುವು ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ನಿದ್ರಾವಾಸ್ಥೆಯಲ್ಲಿರುವ ಸರ್ಕಾರನ್ನು ಎಚ್ಚರಿಸಲು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಕೋಲಾರ ಜಿಲ್ಲೆ ಸೇರಿದಂತೆ ಬಯಲುಸೀಮೆಯ 9 ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅತ್ಯವಶ್ಯಕವೆಂದು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ನಮ್ಮನ್ನು ಆಳಿದ ಈಗ ಅಧಿಕಾರದಲ್ಲಿರುವ ಸರ್ಕಾರ ಜನರ ಸಮಸ್ಯೆ ನಿವಾರಣೆ ಮಾಡಲು ಬದ್ಧತೆ ತೋರುತ್ತಿಲ್ಲ, ಡಾ.ಪರಮಶಿವಯ್ಯ ವರದಿಯನ್ನು ಜಾರಿಗೆ ತಂದು ಜನರಿಗೆ ಶುದ್ಧವಾದ ಕುಡಿಯುವ ನೀರು ಹಾಗೂ ಕೃಷಿಗೆ ಬೇಕಾದ ನೀರನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಕಾಲುಬಾಯಿ ಜ್ವರದಿಂದ ಮೃತಪಟ್ಟ ಹಸುಗಳಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಬಗರ್ ಹುಕುಂ ಸಾಗುವಳಿಯ ಸಕ್ರಮಕ್ಕಾಗಿ, ಎಲ್ಲಾ ನಿವೇಶನ ರಹಿತರಿಗೆ ಮನೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಅಂಗನವಾಡಿ ಕೇಂದ್ರಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ಎಲ್ಲಾ ವಿಭಾಗದ ರೈತರಿಗೂ ಮತ್ತು ಕೂಲಿಕಾರರಿಗೆ ಬ್ಯಾಂಕ್ಗಳಲ್ಲಿ ಹೊಸ ಸಾಲ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು ರೈತರು ಇದಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗಾರಿಗೆ ಕನಿಷ್ಠ 300 ರು. ನೀಡಲು ಮುಂದಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ಅನುದಾನ ನಿಗಧಿಪಡಿಸಬೇಕೆಂದು ಬಯ್ಯಾರೆಡ್ಡಿ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕಾಲುಬಾಯಿ ರೋಗದಿಂದ ಮೃತಪಟ್ಟಿರುವ ರಾಸುಗಳಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 25 ಸಾವಿರ ರು. ನೀಡಬೇಕು ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 28 ಕೋಟಿ ಹಣದಲ್ಲಿ ಹೆಚ್ಚುವರಿಯಾಗಿ 25 ಸಾವಿರ ಪರಿಹಾರ ನೀಡಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ನೀಡಬೇಕಾದ ಪರಿಹಾರ ಹಣ ನೀಡದೆ ಕೇಂದ್ರ ಸರ್ಕಾರ ನೀಡಿರುವ ಹಣವನ್ನು ಮಾತ್ರ ನೀಡಿ ರಾಜ್ಯ ಸರ್ಕಾರದ ಹಣ ಹಾಗೆಯೇ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು. ಡಿ.21 ರಂದು ಮುಖ್ಯಮಂತ್ರಿಗಳ ಜೊತೆ ದೀರ್ಘ ಮಾತುಕತೆ ನಡೆಸಲಾಗಿದ್ದು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಜನವರಿ ಕಳೆದರೂ ಬೇಡಿಕೆ ಈಡೇರಿಸಿಲ್ಲವೆಂದು ದೂರಿದರು.
ಹಾಲು ಕರೆಯುತ್ತಿದ್ದ ಹಸುಗಳು ಮೃತಪಟ್ಟಿದ್ದರೆ ಅವುಗಳಿಗೆ ಸರ್ಕಾರ ಕೇವಲ 25 ಸಾವಿರ ರು.ಗಳನ್ನು ಪರಿಹಾರ ನೀಡಲು ಮುಂದಾಗಿದ್ದು, 50 ಸಾವಿರ ರು. ನೀಡಲು ಒತ್ತಾಯಿಸಲಾಗಿದೆ.
 ಕಾಲುಬಾಯಿ ಜ್ವರದಿಂದ ಮರಣಹೊಂದಿದ ರಾಸುಗಳ ಸಂಖ್ಯೆಯಲ್ಲಿ ಜಿಲ್ಲೆಯು 2 ನೇ ಸ್ಥಾನದಲ್ಲಿದೆ, ಒಟ್ಟಾರೆಯಾಗಿ ಹತ್ತು ಕೋಟಿ ರು. ಬಿಡುಗಡೆಯಾಗಿದ್ದು ಅದರಲ್ಲಿ 5 ಕೋಟಿ ರು.ಗಳು ಹಂಚಿಕೆಯಾಗಿದ್ದು ಉಳಿದ 5 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ, ಉಪಾಧ್ಯಕ್ಷ ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಸಹ ಕಾರ್ಯದರ್ಶಿ ಪಿ.ಆರ್. ನವೀನ್ ಕುಮಾರ್ ತಾಲೂಕು ಅಧ್ಯಕ್ಷ ಕುರ್ಕಿ ದೇವರಾಜ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement