ಟೋಲ್ನಿಂದ ಹಗಲು ದರೋಡೆ: ಆರೋಪ
ಮುಳಬಾಗಲು: ರಾಷ್ಚ್ರೀಯ ಹೆದ್ದಾರಿಗಳಲ್ಲಿ ಟೋಲ್ ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲ, ರಾಷ್ಟ್ರೀಯ ಹೆದ್ದಾರಿ ಟೋಲ್ ವಸೂಲಾತಿ ವಿರೋಧಿ ಒಕ್ಕೂಟದ ಮುಖಂಡ ಶಿವಪ್ರಕಾಶ್ ಆರೋಪಿಸಿದರು.
ಖಾಸಗಿ ಮಾಫಿಯಾದೊಂದಿಗೆ ಶಾಮೀಲಾಗಿ ಜನವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಸರ್ಕಾರದ ಧೋರಣೆ ಖಂಡಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದೆಂದು ಅವರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕಿನ ಮುಖಂಡರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಮಹಾರಾಷ್ಟ್ರದಲ್ಲಿ ಒಂದೇ ದಿನ ಶಿವಸೇನೆ ಕಾರ್ಯಕರ್ತರು ಎಲ್ಲಾ ಟೋಲ್ ದ್ವಂಸ ಮಾಡಿ ಟೋಲ್ ವಸೂಲಿ ತಡೆದಿದ್ದಾರೆ, ಅಲ್ಲಿನ ಜನತೆಯ ಹೋರಾಟದ ಬಿಸಿಗೆ ತಲೆ ಬಗ್ಗಿದ ಮುಖ್ಯ ಮಂತ್ರಿ ಸದ್ಯಕ್ಕೆ ಟೋಲ್ ವಸೂಲಿ ತಡೆ ಹಿಡಿದಿದ್ದಾರೆ. ಈ ರೀತಿ ಜನಜಾಗೃತಿ ಆಗದ ಹೊರತು ಸರ್ಕಾರ ಸ್ಪಂದಿಸುವುದಿಲ್ಲ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಲಂಗೂರು ಶಿವಣ್ಣ ಮಾತನಾಡಿ, ಈ ಕುರಿತು ಜನಜಾಗೃತಿ ಮೂಡಿಸಿ ತಾಲೂಕಿನ ಹನುಮನಹಳ್ಳಿ ಗೇಟ್ ಸಮೀಪ ಲ್ಯಾಂಕೋ ಟೋಲ್ಗೇಟ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಲ್ಲಿಗೆ ಬಂದು ಸಮರ್ಪಕ ಉತ್ತರ ನೀಡಬೇಕು. ಸಂಚಾರಕ್ಕೆ ಅಡ್ಡಿ ಪಡಿಸದೆ ಸುಂಕ ವಸೂಲಾತಿ ತಡೆಯಲಾಗುವುದು ಎಂದರು. ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮಾಶಕ್ತಿ) ರಾಜ್ಯಧ್ಯಕ್ಷ ಹೆಬ್ಬಾಳ ವೆಂಕಟೇಶ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯರಾನಾರಾಯಣ್, ಹುಲುನಾಚೇಗೌಡ, ವಕೀಲ ಉಪ್ಪರಹಳ್ಳಿ ಪ್ರಭಾಕರ್, ತಿಮ್ಮರಾಯಪ್ಪ ಮಾತನಾಡಿದರು. ನಲ್ಲೂರು ರಘುಪತಿಗೌಡ, ವಕೀಲ ಮುನಿಶಾಮಿಗೌಡ, ಕೂಲದೇವಿ ಸುರೇಶ್, ಅಕ್ರಂಪಾಷ, ಬಿ.ಎಂ. ಬತ್ತೆಪ್ಪ, ಗುಜ್ಜಮಾರಂಡಹಳ್ಳಿ ಜಗದೀಶ್, ಎಂ. ವೆಂಕಟರವಣಪ್ಪ, ಎಂ.ಎಸ್. ಶ್ರೀನಿವಾಸರೆಡ್ಡಿ ಇದ್ದರು.