ನಗರೋತ್ಥಾನ ಕಾಮಗಾರಿ ಆರಂಭಿಸಲು ಒತ್ತಾಯ
ಕೋಲಾರ; ಮುಖ್ಯಮಂತ್ರಿಗಳ ನಗರೋತ್ಥಾನ 2ನೇ ಹಂತದ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ 30 ಕೋಟಿ ರು. ಬಿಡುಗಡೆ ಮಾಡಿದ್ದು, ಕಳೆದ ವರ್ಷ ಮಾರ್ಚ್ 16ರಂದೇ ಕಾಮಗಾರಿಗಳು ಪ್ರಾರಂಭವಾಗಬೇಕಾಗಿತ್ತಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ನಗರಸಭೆ 20 ಮಂದಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಕೋಲಾರ ನಗರಸಭೆಗೆ ಅತಿಹೆಚ್ಚು ಅನುದಾನ ನೀಡಲಾಗಿದೆ, ಕೆಜಿಎಫ್ ನಗರಸಭೆಗೆ 15 ಕೋಟಿ, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಹಾಗೂ ಮುಳಬಾಗಿಲು ಪುರಸಭೆಗೆ ತಲಾ 5 ಕೋಟಿ ರು. ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ, ಕೋಲಾರ ನಗರದಲ್ಲಿ ಕೇವಲ ಮೂರು ವಾರ್ಡುಗಳಲ್ಲಿ ಮಾತ್ರ ರಸ್ತೆ, ಚರಂಡಿ ಕಾಮಗಾರಿ ಆರಂಭಿಸಿದ್ದು ಉಳಿದ ಕಡೆ ಇನ್ನು ಕಾಮಗಾರಿಗೆ ಚಾಲನೆ ಸಿಕ್ಕಿಲ್ಲವೆಂದು ಸದಸ್ಯರು ದೂರಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿ ಬಳಿ ಸೇರಿದ ಸದಸ್ಯರು 2014ರ ಮಾರ್ಚ್ 15ಕ್ಕೆ ಕಾಮಗಾರಿ ಮುಗಿಸಬೇಕಾಗಿದೆ. 12 ತಿಂಗಳ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಬೆಂಗಳೂರಿನ ಬಿ.ಎಸ್.ಆರ್ ಇನ್ಫೋಟೆಕ್ ಇಂಡಿಯಾ ಲಿಮಿಟೆಡ್ ಕಂಪನಿಯವರು ಕಾಮಗಾರಿ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದಲ್ಲದೆ ಕಳಪೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸ್ವತಃ ಜಿಲ್ಲಾಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ಸರ್ಕಾರ ಗುತ್ತಿಗೆದಾರರನ್ನು ಬದಲಾವಣೆ ಮಾಡಿ ಬೇರೆಯವರಿಗೆ ಕಾಮಗಾರಿ ವಹಿಸಬೇಕೆಂದು ಆಗ್ರಹಿಸಿದರು.
35 ವಾರ್ಡುಗಳ ಪೈಕಿ ಇನ್ನು 20 ವಾರ್ಡುಗಳಲ್ಲಿ ಕಾಮಗಾರಿ ಆರಂಭವಾಗಿಲ್ಲ. ಗುತ್ತಿಗೆದಾರರಿಗೆ ನೀಡಿದ್ದ ಅವಧಿ ಮುಗಿಯುತ್ತಾ ಬರುತ್ತಿದೆ. ನಮ್ಮ ವಾರ್ಡುಗಳಲ್ಲಿ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಚಾಲನೆ ಸಿಗದಿರುವುದರಿಂದ ಜನತೆ ಟೀಕೆ ಮಾಡಲಾರಂಭಿಸಿದ್ದು ಜಿಲ್ಲಾಧಿಕಾರಿಗಳು ಕೂಡಲೇ ಕಾಮಗಾರಿ ಆರಂಭಕ್ಕೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಬೇಕೆಂದು ತಿಳಿಸಿದರು.
ನಮ್ಮ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಲು ಯೋಜನಾ ನಿರ್ದೇಶಕರ ಕಚೇರಿಗೆ ಬಂದರೆ ಅಲ್ಲಿ ನಮ್ಮನ್ನು ಕ್ಯಾರೆ ಎಂದು ಕೇಳುವವರು ಇರಲಿಲ್ಲ. ಜಿಲ್ಲಾಧಿಕಾರಿಗಳು ಕಂದಾಯ ಅದಾಲತ್ಗೆ ಹೋಗಿದ್ದಾರೆ, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು ಅವರು ಸದಸ್ಯರ ಜೊತೆ ತಾಳ್ಮೆಯಿಂದ ಮಾತನಾಡದೆ ಹೊರಟು ಹೋದರೆಂದು ಸದಸ್ಯರು ಅಳಲು ತೋಡಿಕೊಂಡರು.
ಕಾಮಗಾರಿಗಳನ್ನು ಕೂಡಲೇ ಆರಂಭಿಸದಿದ್ದರೆ 20 ಮಂದಿ ಸದಸ್ಯರು ನಗರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟಸಬೇಕಾಗುತ್ತದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಉಪಾಧ್ಯಕ್ಷ, ಹಾಲಿ 14ನೇ ವಾರ್ಡಿನ ಸದಸ್ಯ ಮುರಳಿಗೌಡ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ವೆಂಕಟೇಶ್, ಸೋಮಶೇಖರ್, ನದೀಮ್ಹುದರ್, ಅಸ್ಲಾಂ, ಶಫೀವುಲ್ಲಾ, ಚಾನ್ ಪಾಷ, ಸಾದೀಕ್ ಪಾಷ, ಮಂಜುನಾಥ್, ಷಂಷಿರ್, ಲಕ್ಷ್ಮಮ್ಮ, ಸಾಕಮ್ಮ, ಪ್ರಸಾದ್ ಬಾಬು, ರೌತ್ ಶಂಕರಪ್ಪ, ಶಾಂತಮ್ಮ ಆಂಜನಪ್ಪ, ರಮೇಶ್, ಚಂದ್ರಮೌಳಿ ಇನ್ನಿತರರು ಇದ್ದರು.