ಸರ್ಕಾರಿ ಜಮೀನು ಒತ್ತುವರಿ ಶೀಘ್ರದಲ್ಲೇ ತೆರವು
ಮಾಲೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಕಂದಾಯ ಅದಾಲತ್ ನಂತರ ಜಿಲ್ಲೆಯ ಎಲ್ಲ ಕೆರೆ, ಕುಂಟೆಗಳು ಸೇರಿದಂತೆ ಸರ್ಕಾರ ಜಮೀನುಗಳ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಹೇಳಿದರು.
ಲಕ್ಕೂರು ಹೋಬಳಿಗಳಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದಿನ ತಿಂಗಳೂಳಗೆ ನೂತನ ಸರ್ವೆಯರ್ಗಳು ನೇಮಕವಾಗುತ್ತಿದ್ದು, ಮೊದಲಿಗೆ ಕೆರೆಗಳ ಸರ್ವೆ ನಡೆಸಲಾಗುವುದು ಎಂದರು. ರೈತರ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗಾಗಿ ಶೇ.80 ರೈತರು ದಿನನಿತ್ಯ ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ. ಈ ಸಮಸ್ಯೆ ನೀಗಿಸಲು ಪ್ರಾರಂಭಿಸಿರುವ ಕಂದಾಯ ಅದಾಲತ್ ತಾಲೂಕಿನಲ್ಲಿ ಯಶಸ್ವಿಯಾಗಿದೆ. ಈಗಾಗಲೇ ತಾಲೂಕಿನ ಟೇಕಲ್ ಹೋಬಳಿಯ 10 ಕಂದಾಯ ವೃತ್ತಗಳಲ್ಲಿ ಕಂದಾಯ ಅದಾಲತ್ ಪೂರ್ಣಗೊಂಡಿದೆ. ಟೇಕಲ್ ಕಂದಾಯ ವೃತ್ತಗಳಲ್ಲಿ ಸಲ್ಲಿಕೆಯಾಗಿದ್ದ 835 ಅರ್ಜಿಗಳಲ್ಲಿ 320 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, ಉಳಿದ 535 ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆ ಹರಿಸಲಾಗಿದೆ ಎಂದರು.
ಅರ್ಜಿಗಳ ಮಹಾಪೂರ: ಲಕ್ಕೂರು ಹೋಬಳಿಯ ಕಂದಾಯ ವೃತ್ತಗಳ ವ್ಯಾಪ್ತಿಯ ಲಕ್ಕೂರು, ದೂಮ್ಮಲೂರು, ಅರಸನಹಳ್ಳಿ, ಪುರ, ಬರಗೂರು, ಸೀತಾನಾಯಕನಹಳ್ಳಿ, ಎಚ್. ಹೊಸಕೋಟೆ ಸೇರಿದಂತೆ ಹಲವು ಗ್ರಾಮಗಳ ರೈತರಿಂದ 891ಅರ್ಜಿಗಳು ಸಲ್ಲಿಕೆಯಾದವು. ತಹಸೀಲ್ದಾರ್ ಡಾ. ಸುಧಾ ಪಾಯ್ಸ್, ಶಾಸಕ ಕೆ.ಎಸ್. ಮಂಜುನಾಥ್ ಗೌಡ, ಉಪತಹಸೀಲ್ದಾರ್ ತಿಮ್ಮರಾಯಪ್ಪ ಸೇರಿದಂತೆ ಕಂದಾಯ ಅಧಿಕಾರಿಗಳು,ಪಂಚಾಯ್ತಿ ಕಾರ್ಯದರ್ಶಿಗಳು ಭಾಗವಹಿಸಿದ್ದರು.