ಸಾಲದ ಬಾಧೆ: ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ಸಾಲದ ಬಾಧೆ ತಡೆಯಲಾಗದೆ ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮುನಿಸಿಪಲ್ ಲೇಔಟ್ನಲ್ಲಿ ನಡೆದಿದೆ.
ಮೃತನನ್ನು ಶಿವಪ್ಪ (35) ಎಂದು ಗುರುತಿಸಲಾಗಿದೆ. ನಗರದ ಮುನ್ಸಿಪಲ್ ಲೇಔಟ್ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಬಟ್ಟೆ ಇಸ್ತ್ರಿ ಕೆಲಸ ಮಾಡಿಕೊಂಡಿದ್ದ ಶಿವಪ್ಪ ವಿಪರೀತ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಒದ್ದಾಡುತ್ತಿದ್ದ. ಈ ನಡುವೆ ಸಾಲಗಾರರ ಕಿರುಕುಳ ತಾಳಲಾರದೇ ಇಸ್ತ್ರಿ ಅಂಗಡಿಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಅಂಗಡಿಯ ಬಾಗಿಲು ಅರ್ಧ ಮುಚ್ಚಿದ್ದರಿಂದ ಅನುಮಾನಗೊಂಡ ಜನರು ಪರಿಶೀಲಿಸಿದಾಗ ದುರ್ಘಘಟನೆ ನಡೆದಿರುವುದು ತಿಳಿದು ಬಂದಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಡಿದು ವಾಹನ ಚಾಲನೆ; ದಂಡ
ಶಿಡ್ಲಘಟ್ಟ: ಕುಡಿದು ವಾಹನ ಚಲಾಯಿಸುತ್ತಿದ್ದವರನ್ನು ಹಿಡಿದು ಕೋರ್ಟಿಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಪರಾದ ವಿಭಾಗದ ಪಿಎಸ್ಐ ಜಗದೀಶ್ ಅನುಮಾಸ್ಪದವಾಗಿ ಕಂಡು ಬಂದ ಇಬ್ಬರನ್ನು ಹಿಡಿದು ವಿಚಾರಣೆ ಮಾಡಲಾಗಿ ಕುಡಿದು ವಾಹನ ಚಲಾಯಿಸುತ್ತಿರುವುದು ಕಂಡುಬಂದಿದ್ದು, ಅವರನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಹರೀಶ್ ಕುಡಿದು ಟೆಂಪೋ ಚಾಲನೆ ಮಾಡುತ್ತಿದ್ದು, ರಮೇಶ್ ಕುಡಿದು ಬೈಕ್ ಚಾಲಣೆ ಮಾಡುತ್ತಿರುವುದು ಸಾಬೀತಾಗಿದ್ದರಿಂದ ನ್ಯಾಯಾಲಯಹರೀಶ್ಗೆ 1,750 ರು. ಹಾಗೂ ರಮೇಶ್ಗೆ 2,600 ರಿ. ದಂಡ ವಿದಿಸಿದೆ.
ಜೂಜಾಟ; 12 ಮಂದಿ ಬಂಧನ
ಟೇಕಲ್: ಮಾಲೂರು ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮಾಹಿತಿ ಮೇರೆಗೆ ಮಾಸ್ತಿ ಪೊಲೀಸರು ಲಕ್ಷ್ಮೀಸಾಗರದ ಬಳಿಯ ಕಿಟ್ಟಪ್ಪನವರ ನೀಲಗಿರಿ ತೋಪಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದ 12 ಮಂದಿಯನ್ನು ಬಂಧಿಸಿ ಪಣಕ್ಕಿಟ್ಟಿದ್ದ 4,850 ರುಪಾಯಿ ಹಾಗೂ 5 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇಸು ದಾಖಲಿಸಿಕೊಂಡು ಎಲ್ಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.