ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನಧಿಕೃತ ಬಡಾವಣೆ: 3ದಿನ ಗಡುವು

Vishwanath S
Updated On : 5 Feb 2014, 12:08 pm

ಕೋಲಾರ: ನಗರದಲ್ಲಿ ಎಷ್ಟು ಅನಧಿಕೃತ ಬಡಾವಣೆಗಳು ತಲೆ ಎತ್ತಿವೆ, ಕಾನೂನು ಬಾಹಿರವಾಗಿ ಎಷ್ಟು ನಿವೇಶನಗಳನ್ನು ಮಾರಾಟ ಮಾಡಲಾಗಿದೆ, ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುವ ನಿವೇಶನಗಳ ಸಂಖ್ಯೆ ಹಾಗೂ ಬಡಾವಣೆಯಲ್ಲಿ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಉಪ ನೋಂದಣಾಧಿಕಾರಿಗೆ ಮೂರು ದಿನ ಗಡುವು ನೀಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾನೂನು ಪ್ರಕಾರ ಅನುಮತಿ ಇಲ್ಲದೆ ಕೆಲವು ಕಡೆ ಬಡಾವಣೆಗಳನ್ನು ರಚನೆ ಮಾಡಿ, ಯಾವುದೇ ಮೂಲ ಸೌಕರ್ಯ ಕಲ್ಪಿಸದೆ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿಗೆ ಮೇರೆಗೆ ಜಿಲ್ಲಾಧಿಕಾರಿಗಳು ಮಂಗಳವಾರ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹಠಾತ್ ಭೇಟಿ ನೀಡಿ ವಿವಿಧ ಬಡಾವಣೆಗಳಲ್ಲಿ ಮಾರಾಟವಾಗಿರುವ ಮತ್ತು ನೋಂದಣಿ ಆಗಿರುವ ನಿವೇಶನಗಳ ಮಾಹಿತಿ ಸಂಗ್ರಹಣೆ ಮಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂಪರಿವರ್ತನೆ, ಬಡಾವಣೆಯ ರಚನೆ, ಹಾಗೂ ನಿವೇಶನಗಳ ಮಾರಾಟಕ್ಕೆ ಅನುಮತಿ ದೊರೆತ ನಂತರವೇ ಮಾರಾಟ ಮಾಡಿ ನಂತರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು, ಒಂದು ವೇಳೆ ಹೊಸ ಬಡಾವಣೆಗಳಲ್ಲಿ ಕಾನೂನು ಮೀರಿ ನಿವೇಶನಗಳನ್ನು ಮಾರಾಟ ಮಾಡಿದ್ದರೆ ಪರಿಶೀಲಿಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಲೋಪಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇನ್ನು ಮುಂದೆ ಅನಧಿಕೃತ ಬಡಾವಣೆಯಲ್ಲಿ ನಿವೇಶನ ಮಾರಾಟ ಆಗಿದ್ದಲ್ಲಿ ಸಮಗ್ರವಾಗಿ ಪರಿಶೀಲಿಸಿ ಕೂಡಾ ನಿಯಮಗಳ ಪ್ರಕಾರ ನಿವೇಶನ ಮಾರಾಟವಾಗಿದ್ದಲ್ಲಿ ಮಾತ್ರ ನೋಂದಣಿ ಮಾಡಿ ಎಂದು ತಾಕೀತು ಮಾಡಿದರು. ಅಧಿಕಾರಿಗಳ ಕುಮ್ಮಕ್ಕಿನಿಂದ ಲೈಔಟ್ ಮಾಲೀಕರು ಮೇಲುಗೈ ಸಾಧಿಸುತ್ತಿದ್ದಾರೆಂಬ ಆರೋಪಗಳಿದ್ದು ಮೂರು ದಿನಗಳಲ್ಲಿ ತಮಗೆ ಎಲ್ಲಾ ಮಾಹಿತಿ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಕೆಲವರು ತಮ್ಮ ಬಡಾವಣೆಗಳಲ್ಲಿ ವಿಲೇವಾರಿ ಆಗದಿರುವ ನಿವೇಶನಗಳ ಮಾರಾಟ ಇಲ್ಲವೇ ನೋಂದಣಿಗಾಗಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ, ಕಾನೂನು ಬಾಹಿರವಾದ ಚಟುವಟಿಕೆಗಳನ್ನು ನಾನು ಸಹಿಸುವುದಿಲ್ಲ, ಅಕ್ರಮ ನಡೆಸಿ ಎಂದು ಅಧಿಕಾರಿಗಳಿಗೆ ಹೇಳುವ ವ್ಯಕ್ತಿ ನಾನಲ್ಲ, ಇನ್ನೊಮ್ಮೆ ಯಾರಾದರೂ ನನ್ನ ಹೆಸರು ಹೇಳಿಕೊಂಡು ಬಂದು ಬಡಾವಣೆಗಳಲ್ಲಿನ ನಿವೇಶನವನ್ನು ಮಾರಾಟ ಮಾಡಿ ನೋಂದಣಿಗೆ ಒತ್ತಾಯಿಸಿದಲ್ಲಿ ಕೂಡಲೇ ನನ್ನ ಗಮನಕ್ಕೆ ತರುವಂತೆ ಅಧಿಕರಿಗಳಿಗೆ ಸೂಚಿಸಿದರು. ಕೂಡಾದಿಂದ ಅನುಮತಿ ಹೊಂದಿರುವ ಬಡಾವಣೆಗಳಲ್ಲಿ ರಸ್ತೆ, ದೀಪ, ನೀರಿನ ಟ್ಯಾಂಕ್, ಒಳಚರಂಡಿ, ಉದ್ಯಾನವನ, ಸಿಎ ಸೈಟುಗಳಿಗೆ ಜಾಗ ಮೀಸಲು ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳು ಇರಬೇಕು. ಒಂದು ವೇಳೆ ಕೂಡಾ ನಿಯಮಗಳು ಪಾಲನೆ ಆಗಿಲ್ಲದಿದ್ದರೆ ನೋಟಿಸ್ ಜಾರಿ ಮಾಡಬೇಕು, ಅಧಿಕಾರಿಗಳು ಮೂರು ದಿನಗಳಲ್ಲಿ ವರದಿ ನೀಡಿದ ನಂತರ ತಾವೇ ಖುದ್ಧು ಬಡಾವಣೆಗಳಿಗೆ ಭೇಟಿ ನೀಡಿ ನಿಯಮಗಳನ್ನು ಪಾಲನೆ ಮಾಡದಿರುವವರ ವಿರುದ್ಧ ಕ್ರಮ ಕೈಗೊಳ್ಳುವೆ ಎಂದು ಸಬ್‌ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜಗದೀಶ್, ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಸರ್ವರ್ ಮರ್ಚೆಂಟ್ ಇನ್ನಿತರ ಅಧಿಕಾರಿಗಳು ಇದ್ದರು.
ಅಧಿಕಾರಿಗಳ ಕುಮ್ಮಕ್ಕಿನಿಂದ ಲೈಔಟ್ ಮಾಲೀಕರು ಮೇಲುಗೈ ಸಾಧಿಸುತ್ತಿದ್ದಾರೆಂಬ ಆರೋಪಗಳಿದ್ದು ಮೂರು ದಿನಗಳಲ್ಲಿ ತಮಗೆ ಎಲ್ಲಾ ಮಾಹಿತಿ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ
-  ಡಿ.ಕೆ. ರವಿ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement