ದುಗ್ಗಸಂದ್ರದಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆಗೆ ಚಿಂತನೆ: ಡಿಸಿ
ಕೋಲಾರ: ಜಿಲ್ಲೆಯ ಮುಳಬಾಗಲು ತಾಲೂಕಿನ ದುಗ್ಗಸಂದ್ರದಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಉದ್ದೇಶಿತ ಯೋಜನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆ ಜಾರಿಗೆ ಬಂದಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾದನಾ ವಲಯಕ್ಕೆ ದುಗ್ಗಸಂದ್ರ 14ನೇ ವಲಯವಾಗಿ ಸೇರುತ್ತದೆ ಎಂದರು.
ಕೋಲಾರ ಸೇರಿದಂತೆ ತುಮಕೂರು, ಗುಲ್ಬರ್ಗಾ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ರಾಷ್ಟ್ರೀಯ ಬಂಡವಾಳ ಉತ್ಪಾಧನಾ ವಲಯವನ್ನು ತೆರೆಯುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದ್ದು ಕೇಂದ್ರ ಸರ್ಕಾರ ಇದಕ್ಕೆ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಮೊದಲನೇ ಹಂತವಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇತರೆ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದರು. ಕೋಲಾರ ತಾಲೂಕಿನ ನರಸಾಪುರ ಮಾದರಿಯಲ್ಲಿ ದುಗ್ಗಸಂದ್ರ ಬಂಡವಾಳ ವಲಯ ಅಭಿವೃದ್ಧಿಯಾಗಲಿದ್ದು, ರಾಜ್ಯ ಸೇರಿದಂತೆ ಅಂತಾರಾಷ್ಟ್ರೀಯ ಕಂಪನಿಗಳು ಬಂಡವಾಳ ಹೂಡಿದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದರು.