ಮಾನವ ಹಕ್ಕುಗಳ ಆಯೋಗಕ್ಕೆ ನೇಮಕ; ಸ್ವಾಗತ
ಗುಡಿಬಂಡೆ: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಜ.29 ರಂದು ರಾಜ್ಯ ಉಚ್ಚನ್ಯಾಯಾಲಯದ ನಿರ್ದೇಶನದ ಮೇರೆಗೆ ನ್ಯಾಯಾಧೀಶ ಎಂ. ಮಹದೇವಯ್ಯರನ್ನು ಕಾರ್ಯದರ್ಶಿಗಳನ್ನಾಗಿ ನೇಮಕಾತಿ ಮಾಡಿರುವುದನ್ನು ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಸ್ವಾಗತಿಸಿದೆ.
ಹೇಳಿಕೆ ನೀಡಿರುವ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಜಿ.ವಿ. ವಿಶ್ವನಾಥ್, ರಾಜ್ಯದಲ್ಲಿ ಮಾನವ ಹಕ್ಕುಗಳ ಸ್ಥಾಪನೆ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಳೆದ ಒಂದು ವರ್ಷದಿಂದ ಕಾರ್ಯದರ್ಶಿಗಳನ್ನು ರಾಜ್ಯ ಸರ್ಕಾರ ನೇಮಕಾತಿ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದು, ಈ ಸಂಬಂಧ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆಯನ್ನು ನಡೆಸಿತ್ತು, ಕಡೆಗೂ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಸ್ಥಾನ ಭರ್ತಿ ಮಾಡಲು ಮುಂದಾಗಬೇಕು, ರಾಜ್ಯಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ನ್ಯಾ.ಡಾ.ಎಸ್.ಆರ್. ನಾಯಕ್ ಅವರು ನಿವೃತ್ತಿಯಾದ ಕಾಲದಿಂದ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿರುವುದು ರಾಜ್ಯ ಸರ್ಕಾರದ ಬೇಜವಾಬ್ದಾರಿ ಎತ್ತಿ ತೋರುತ್ತಿದೆ ಎಂದರು.
ಬಿಎಡ್ ಕಾಲೇಜಿನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ
ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ಸಿವಿವಿ ಕ್ಯಾಂಪಸ್ನಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಿ.ಎಡ್ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗೆ ಕೆವಿ ಮತ್ತು ಪಂಚಗಿರಿ ದತ್ತಿಯ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಪಡೆದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸುವ ಸಾಮರ್ಥ್ಯ ಬೆಳಸಲು ಅಗತ್ಯವಿರುವ ಕಲಿಕಾ ವಾತಾವರಣ ನಿರ್ಮಾಣ ಮಾಡುವುದೇ ಕೆವಿ ವಿದ್ಯಾ ಸಂಸ್ಥೆಗಳ ಮುಖ್ಯ ಗುರಿಯಾಗಿದೆ ಎಂದರು. ಸಂಸ್ಥೆಯ ಸಂಸ್ಥಾಪಕ ದಿ.ಸಿ.ವಿ. ವೆಂಕಟರಾಯಪ್ಪನವರು ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕೆಂಬ ಕನಸಿನೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದವರು. ಅವರ ಕನಸು ನನಸಾಗಿಸಲು ಶ್ರಮಿಸಲಾಗುತ್ತಿದೆ ಎಂದರು. ಬಿಎಡ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ನಾಗಭೂಷಣ್ ಮಾತನಾಡಿ, ನೂತನವಾಗಿ ನಿರ್ಮಿಸುತ್ತಿರುವ ಕಟ್ಟಡದಲ್ಲಿ ಹೈಟೆಕ್ ಗ್ರಂಥಾಲಯ, ತರಗತಿಗಳು, ಕಂಪ್ಯೂಟರ್ ಹಾಗೂ ಪ್ರಯೋಗ ಶಾಲೆಗಳು ಇರಲಿವೆ ಎಂದರು. ಕಟ್ಟಡ ವಿನ್ಯಾಸಕಾರ ಅಭಿಯಂತರ ಜೈನಾಥ್, ಪ್ರಗತಿಪರ ರೈತ ನುಗತಹಳ್ಳಿ ಮಂಜುನಾಥ್, ಕೆವಿ ಟ್ರಸ್ಟ್ ಸದಸ್ಯ ಕೊಂಡಪ್ಪ, ಬಿ. ಮುನಿಯಪ್ಪ, ಡಿಎಡ್ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್, ವ್ಯವಸ್ಥಾಪಕ ಫರೀದ್, ಗುತ್ತಿಗೆದಾರ ದಿನೇಶ್, ರಾಮಚಂದ್ರಶಾಸ್ತ್ರಿ ಇದ್ದರು.
ಉತ್ತಮ ಸಮಾಜದ ನಿರ್ಮಾಣದಲ್ಲಿ ಶೈಕ್ಷಣಿಕ ಪಾತ್ರ ಮಹತ್ವದ್ದು
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಇತರರಿಗಿಂತಹ ಗುರುತರ ಜವಾಬ್ದಾರಿ ಶಿಕ್ಷಕರು ಹಾಗೂ ಶಾಲೆಗಳ ಮೇಲಿದೆ. ಜೊತೆಗೆ ಉತ್ತಮ ಸಮಾಜದ ನಿರ್ಮಾಣದಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಪ್ರಮುಖವಾದುದು ಎಂದು ಹಿರಿಯ ಪತ್ರಕರ್ತ ಎಚ್.ವಿ. ಸೋಮಶೇಖರ್ ಅಭಿಪ್ರಾಯಪಟ್ಟರು.
ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಉತ್ತಮ ಶಿಕ್ಷಣ, ದೇಶಭಕ್ತಿ ಬಿಂಬಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎಂದರು.
ನಗರಸಭಾ ಸದಸ್ಯೆ ಎಂ. ಜಯಮ್ಮ ಮಾತನಾಡಿ, ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕು. ಈ ಮೂಲಕ ತಂದೆ ತಾಯಿ, ಗುರು ಮತ್ತು ದೇಶಕ್ಕೆ ಕೀರ್ತಿಯನ್ನು ತರಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷೆ ಶೈಲಜಾ ವೆಂಕಟೇಶ್, ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರು ಸಹಕಾರ ನೀಡಬೇಕು. ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದರು. ಇದೇ ಸಂದರ್ಭದಲ್ಲಿ ಶಾಲಾ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಉರುಗ ತಜ್ಞ ಪೃಥ್ವಿರಾಜ್, ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಡೆಡ್ ಬಾಡಿ ಕುಮಾರ್, ಭರತನಾಟ್ಯ ಪ್ರವೀಣೆ ಆಶಾ ಗುರುಪ್ರಸಾದ್ ರವರನ್ನು ಸನ್ಮಾನಿಸಲಾಯಿತು.
ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ
ಚಿಂತಾಮಣಿ: ಜನ ಸಾಮಾನ್ಯರಿಗೆ ಬ್ಯಾಂಕ್ನಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಮುಂದಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಬೂರಗಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ ಮತ್ತು ಲೀಡ್ ಬ್ಯಾಂಕ್ ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಚಿಂತಾಮಣಿ ತಾಲ್ಲೂಕು ಬ್ಯಾಂಕ್ಗಳ ಮತ್ತು ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು.
ಬ್ಯಾಂಕ್ಗಳಿಂದ ದೊರೆಯುವ ಸಾಲ ಸೌಲತ್ತು ಪಡೆದು ಸ್ವಾವಲಂಭಿಗಳಾಗಿ ಜೀವನ ನಡೆಸಿದಾಗ ದೇಶ ಆರ್ಥಿಕವಾಗಿ ಬಲಿಷ್ಠಗೊಳ್ಳಲು ಸಾಧ್ಯ ಎಂದರು. ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಹಲವು ಬ್ಯಾಂಕ್ ಅಧಿಕಾರಿಗಳು ವಿನಾಕಾರಣ ಸಾಲ ನೀಡುವ ನೆಪದಿಂದ ಜನಸಾಮಾನ್ಯರನ್ನು ಪರದಾಡಿಸುವ ಬದಲು ಅವರಿಗೆ ಸಾಲ ಪಡೆಯಲು ಅರಿವು ಮೂಡಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಬ್ಯಾಂಕಿನ ಜನರಲ್ಮ್ಯಾನೇಜರ್ ಆರ್. ಸಂಪತ್ ಕುಮಾರ್ ಮಾತನಾಡಿದರು. ವಾಣಿಕೃಷ್ಣಾರೆಡ್ಡಿ, ಬ್ಯಾಂಕ್ ಅಧಿಕಾರಿಗಳಾದ ವೆಂಕಟರವಣಪ್ಪ, ಸಂಪತ್ ಕುಮಾರ್ ಇದ್ದರು.
ಬಂಗಾರಪೇಟೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ: ಚೆಕ್ ವಿತರಣೆ
ಬಂಗಾರಪೇಟೆ: ಆರ್ಥಿಕವಾಗಿ ಹಿಂದುಳಿದವರನ್ನು ಬ್ಯಾಂಕುಗಳು ಗುರ್ತಿಸಿ ಸಾಲ ನೀಡಿ ಸ್ವಾವಲಂಭಿಗಳಾಗಿ ಬದುಕುವಂತೆ ಮಾಡಬೇಕು ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೂಚಿಸಿದರು.
ಪಟ್ಟಣದ ಎಸ್ಎನ್ಆರ್ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಹಾಗೂ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿ, ಎಲ್ಲರೂ ಸಮಬಾಳ್ವೆ ಬಾಳಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ರೂಪಿಸಿದೆ ಪ್ರಚಾರದ ಕೊರತೆಯಿಂದ ಫಲಾನುಭವಿಗಳಿಗೆ ಯೋಜನೆ ಲಭ್ಯವಾಗುತ್ತಿಲ್ಲ. ಬ್ಯಾಂಕಿನ ವ್ಯವಸ್ಥಾಪಕರು ತಾರತಮ್ಯಯಿಲ್ಲದೆ ಸಾಲ ನೀಡಬೇಕು ಎಂದು ಹೇಳಿದರು.
ಸಾಲ ಪಡೆದವರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಬ್ಯಾಂಕ್ಗಳು ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ, ಕೆಲವು ಬ್ಯಾಂಕಗಳು ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಹೊಂದಿಲ್ಲದ ಕಾರಣ ಸಾರ್ಕರದ ಯೋಜನೆಗಳು ಸಮಯಕ್ಕೆ ಜನರಿಗೆ ಮುಟ್ಟಲು ಕಷ್ಟವಾಗಿದೆ ಎಂದರು. ತಹಸೀಲ್ದಾರ್ ಉಷಾ ಇದ್ದರು.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ಬಗುರ್ ಹುಕುಂ ಜಮೀನಿಗೆ ಸಾಗುವಳಿ ಪತ್ರ, ಬಡವರಿಗೆ ನಿವೇಶನ,ಪರಮಶಿವಯ್ಯ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ನಗರದ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಭೂಮಿ ಮನೆ ಕೊಡಿ, ಇಲ್ಲವೆ ಜಾಗ ಖಾಲಿ ಮಾಡಿ ಎಂಬ ಘೋಷಣೆಯೊಂದಿಗೆ ಕಚೇರಿ ಆವರಣಕ್ಕೆ ಜಮಾಯಿಸಿದ ಪಕ್ಷದ ಕಾರ್ಯಕರ್ತರು,ದಲಿತರ ಏಳ್ಗೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
ಬಿಎಸ್ಪಿ ರಾಜ್ಯ ಖಜಾಂಚಿ ಕೋರಮಂಗಲ ಮುನಿಯಪ್ಪ ಮಾತನಾಡಿ, 66 ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ದಲಿತ, ಹಿಂದುಳಿದ ಸಮುದಾಯಗಳನ್ನು ಸಂಪೂರ್ಣ ನಿರ್ಲಕ್ಷಿಸಿವೆ. ಹಲವು ವರ್ಷದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡದೆ ವಂಚಿಸಲಾಗುತ್ತಿದೆ. ರಾಜ್ಯದಲ್ಲಿ ಶೇ.75ರಷ್ಟು ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಇತರೆ ಹಿಂದುಳಿದ ಒಟ್ಟು ಸಮುದಾಯಗಳ ಮಂದಿಗೆ ಇದುವರೆಗೂ ಭೂಮಿ ಇಲ್ಲ. ಭೂ ಮಾಫಿಯಾಗಳ ಹಾವಳಿಯಿಂದ ಭೂರಹಿತ ಬಡವರಿಗೆ ಹಂಚಬೇಕಾದ ಸರ್ಕಾರಿ ಭೂಮಿ ಭೂ ಮಾಲೀಕರ ಪಾಲಾಗುತ್ತಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾದ ಡಾ. ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಕಾರ್ಯದರ್ಶಿ ವೀರಣ್ಣ ಮೌರ್ಯ ಮಾತನಾಡಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸುಳ್ಳು ಹೇಳಿಕೆ, ಹುಸಿ ಭರವಸೆ ನೀಡಿ ಈ ಭಾಗದ ಜನರನ್ನು ವಂಚಿಸುತ್ತಿದ್ದಾರೆ. ಸಮಗ್ರ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವುದಾಗಿ ಹೇಳಿ, ಈಗ ಅದನ್ನು ನಿರ್ಲಕ್ಷಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಧನರಾಜ್, ಉಪಾಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿ ನಾಗರಾಜ್, ಬೆಂಗ್ರಾ ಜಿಲ್ಲೆಯ ವೆಂಕಟೇಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಸಚಿವರ ಕಾರು ಅಡ್ಡಗಟ್ಟಿ ಘೋಷಣೆ
ಕೆಜಿಎಫ್: ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಬೆಂಬಲಿಗರು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರನ್ನು ಅತಾವುಲ್ಲಾ ನಿವಾಸಕ್ಕೆ ತೆರಳದಂತೆ ಕಾರನ್ನು ಅಡ್ಡಗಟ್ಟಿ ಘೋಷಣೆ ಕೂಗಿದರು. ನಗರದಲ್ಲಿ ನಡೆದ ಬ್ಯಾಂಕ್ ಕಾರ್ಯಕ್ರಮ ಮುಗಿಸಿಕೊಂಡು ನಗರಸಭೆ ಮಾಜಿ ಅಧ್ಯಕ್ಷ ಅತಾವುಲ್ಲಾ ನಿವಾಸಕ್ಕೆ ತೆರಳಲು ಜಿಪಂ ಸದಸ್ಯ ಆರ್. ನಾರಾಯಣರೆಡ್ಡಿ ಸೂಚಿಸಿದಾಗ ಈ ಘಟನೆ ನಡೆದಿದ್ದು ಇದರಿಂದ ಸ್ಥಳದಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಕಾರ್ಯಕ್ರಮದಲ್ಲಿ ಕೆಜಿಎಫ್ ಮೂಲದ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಭಾಗವಹಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ನೀರಿನ ಸಮಸ್ಯೆಗೆ ಪರಿಹಾರ
ಮುಳಬಾಗಲು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 27 ಕೋಟಿ ವೆಚ್ಚದಲ್ಲಿ 2 ಬೃಹುತ್ ಓವರ್ ಹೆಡ್ ಟ್ಯಾಂಕ್ ನಿರ್ಮಿಸಗಾಗುವುದು ಎಂದು ರಾಜ್ಯ ನಗರ ನೀರು ಸರಬರಾಜು ಮಂಡಳಿ ಬೇತಮಂಗಲ ವಿಭಾಗದ ಅಧಿಕಾರಿ ರಘುನಾಥಶೆಟ್ಟಿ ತಿಳಿಸಿದರು. ಒಂದನ್ನು ರಾಷ್ಟ್ರೀಯ ಹೆದ್ದಾರಿ ಕೆ. ಭಯ್ಯಪಲ್ಲಿ ರಸ್ತೆ ಹಾಗೂ ಕಾಳಿಕಾಂಬ ದೇವಾಲಯದ ಬಳಿ ಮತ್ತೊಂದನ್ನು ನಿರ್ಮಿಸಲಾಗುವುದು, ಶಿಘ್ರದಲ್ಲಿಯೆ 85 ಕೊಳವೆಬಾವಿಗಳು, ಪೈಪ್ ಲೈನ್ ಸೇರಿದಂತೆ ಉಳಿದ ಕಾಮಗಾರಿ ಆರಂಭಿಸಲಾಗುವುದು ಎಂದರು.
ಇಂದು ಶಿಡ್ಲಘಟ್ಟಕ್ಕೆ ಸಚಿವರ ಭೇಟಿ
ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಫೆ.5 ರಂದು ಶಿಡ್ಲಘಟ್ಟಕ್ಕೆ ಭೇಟಿ ನೀಡುತ್ತಿದ್ದು, ಬೆಳಗ್ಗೆ 9.45 ಕ್ಕೆ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ನಂತರ ಬೆಳಗ್ಗೆ 10.30 ಕ್ಕೆ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ರೇಷ್ಮೆ ಇಲಾಖೆಯವರ ನೂತನ ಕಟ್ಟಡದ ಉದ್ಘಾಟನೆ, 11 ಗಂಟೆಗೆ ಆಶ್ರಮ ಬಡಾವಣೆಯಲ್ಲಿ 2012-13ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಾಧ್ಯಮ ಪಟ್ಟಣಗಳ ನಗರೋತ್ಥಾನ ಭಾಗ-2 ಯೋಜನೆಯಡಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30 ಕ್ಕೆ ಪಟ್ಟಣದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 2.30 ಕ್ಕೆ ಶಿಡ್ಲಘಟ್ಟ ತಾಪಂ ಸಭಾಂಗಣದಲ್ಲಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಡಾ. ನಂದನ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಇಂದು
ಶಿಡ್ಲಘಟ್ಟ: 2012-13 ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರೋತ್ಥಾನ ಭಾಗ-2 ಯೋಜನೆಯಡಿ ಪಟ್ಟಣದ ಆಶ್ರಯ ಬಡಾವಣೆಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಪೌರಾಡಳಿತ ಸಚಿವ ಖಮರುಲ್ಲಾ ಇಸ್ಲಾಂ ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದು ಶಾಸಕ ಎಂ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎ.ಎಚ್. ಶಿವಯೋಗಿಸ್ವಾವು, ನಸೀರ್ ಅಹ್ಮದ್, ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ಡಾ.ಎನ್. ಮಂಜುಳಾ, ಜಿಲ್ಲಾಧಿಕಾರಿ ಡಾ.ವಿಶಾಲ್ ಭಾಗವಹಿಸಲಿದ್ದಾರೆ.
ಅಪಘಾತದಲ್ಲಿ ಮಹಿಳೆ ಸಾವು
ಮಾಲೂರು: ಮುಖ್ಯ ರಸ್ತೆಗೆ ಗ್ರಾಮದ ರಸ್ತೆಯಿಂದ ವೇಗವಾಗಿ ಬಂದ ಬೈಕ್ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್ಗಳು ಹಿಂದೆ ಬರುತ್ತಿದ್ದ ಪೊಲೀಸ್ ಡಿಆರ್ ವಾಹನಕ್ಕೆ ಗುದ್ದಿ ಬೈಕಿನಲ್ಲಿದ್ದ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೂಂಡಿರುವ ಮೃತರ ಪತಿ ಹಾಗೂ ಇನ್ನೂಬ್ಬರು ಕೋಲಾರದ ಆಸ್ವತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ರಾತ್ರಿ ಕೋಲಾರ ರಸ್ತೆಯ ಚಿಕ್ಕ ಸಬ್ಬೇನಹಳ್ಳಿ ಗೇಟ್ಬಳಿ ನಡೆದಿದೆ.
ಮೃತರನ್ನು ಕೋಲಾರ ಮಲ್ಲಸಂದ್ರದ ಪಂಕಜಾ(35) ಎಂದು ಗುರುತಿಸಲಾಗಿದೆ. ಆಕೆಯ ಭಾವ ಹಾಗೂ ಇವರ ಗಾಡಿಗೆ ಗುದ್ದಿದ್ದ ಇನ್ನೊಂದು ಬೈಕ್ನಲ್ಲಿದ್ದ ಸಬ್ಬೇನಹಳ್ಳಿಯ ನಾರಾಯಣಸ್ವಾಮಿರನ್ನು ಕೋಲಾರದ ಆಸ್ವತ್ರೆಗೆ ಸೇರಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಅಪಘಾತಕ್ಕೆ ಒಳಗಾಗಿದ್ದ ಪೊಲೀಸ್ ವಾಹನ ಕೋಲಾರಕ್ಕೆ ಸಾಗಿಸಲು ಒಪ್ಪದಿದ್ದ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ 108 ರಲ್ಲಿ ಗಾಯಾಳುಗಳನ್ನು ಸಾಗಿಸಿದ ನಂತರ ಸ್ಥಳೀಯ ಪೊಲೀಸರು ಪ್ರತಿಭಟನಾಕಾರರ ಮನವೂಳಿಸಿ ರಸ್ತೆ ತೆರವುಗೊಳಿಸಿದರು. ಈ ಘಟನೆಯಿಂದ ಸುಮಾರು ಒಂದು ಗಂಟೆ ಕಾಲ ರಸ್ತೆ ಸಂಚಾರಕ್ಕೆ ಅಡಚಣೆವುಂಟಾಗಿತ್ತು.
ಅಂದರ್ ಬಾಹರ್: 7 ಮಂದಿ ಬಂಧನ
ಟೇಕಲ್: ಖಚಿತ ಮಾಹಿತಿ ಮೇರೆಗೆ ಮಾಸ್ತಿ ಪಿಎಸ್ಐ ಸಿದ್ದಪ್ಪನವರು ಮತ್ತು ಅವರ ತಂಡ ಟೇಕಲ್ನ ಹುಳದೇನಹಳ್ಳಿಯ ರಾಮೇಗೌಡರ ನೀಲಗಿರಿ ತೋಪಿನಲ್ಲಿ ಮಂಗಳವಾರ ಸಂಜೆ ನಡೆದ ದಾಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 7 ಮಂದಿಯನ್ನು ಬಂಧಿಸಿ ಅವರ ಬಳಿ ಇದ್ದ 2630 ರು. ನಗದು ಹಣವನ್ನು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ಕೆಜಿಎಫ್: ಆಂಡ್ರಸನ್ಪೇಟೆ ಪ್ರಾಥಾಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಸರಿಯಾಗಿ ಬಾರದ ಕಾರಣ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಆರೋಗ್ಯ ಕೇಂದ್ರವನ್ನಾಧರಿಸಿ ಸುತ್ತಮುತ್ತಲ ನಾಗರಿಕರು ಚಿಕಿತ್ಸೆಗಾಗಿ ಬರುತ್ತಿದ್ದು, ವೈದ್ಯರ ಗೈರುಹಾಜರಿಯಿಂದ ಸಮಸ್ಯೆ ಉಂಟಾಗುತ್ತಿದೆ. ಆರೋಗ್ಯ ಕೇಂದ್ರದಲ್ಲಿ ಶುಶ್ರೂಕಿಯರು ಹಾಗೂ ಸಿಬ್ಬಂದಿ ರೋಗಿಗಳನ್ನು ಪ್ರಾಣಿಗಳಂತೆ ಕಾಣಿತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಮಣಿದು ಸ್ಥಳಕ್ಕಾಗಮಿಸಿದ ವೈದ್ಯರು ಚಿಕಿತ್ಸೆ ನೀಡುವುದಾಗಿ ಹೇಳಿ ಸಮಾದಾನ ಪಡಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.