ಸಾಲಸೌಲಭ್ಯ ಪಡೆದು ಆರ್ಥಿಕ ಸದೃಢರಾಗಿ: ಸಚಿವ ಮುನಿಯಪ್ಪ
ಕೆಜಿಎಫ್: ದೇಶದ ಎಲ್ಲಾ ವರ್ಗದ ಜನರಿಗೆ ನೆರವಾಗುವಂತೆ ಮಾಜಿ ಪ್ರಧಾನಿ ದಿವಂಗತ ಇಂದಿಗಾಗಾಂಧಿ ಅವರ ಮಾರ್ಗದರ್ಶನದಲ್ಲಿ ಯುಪಿಎ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಮಾರ್ಗದರ್ಶನ ಬ್ಯಾಂಕ್ನಿಂದ ಹಮ್ಮಿಕೊಂಡಿದ್ದ ಬ್ಯಾಂಕ್ ಅಧಿಕಾರಿಗಳ ಹಾಗೂ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಚಿನ್ನದ ಗಣಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ಬಿಜಿಎಂಎಲ್ ಚಿನ್ನದ ಗಣಿಯನ್ನು ಪರುನಶ್ಚೇತನಗೊಳಿಸಲು ಮುಂಬರುವ ಮಾರ್ಚ್ ತಿಂಗಳಲ್ಲಿ ಜಾಗತಿಕ ಗ್ಲೋಬಲ್ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ಒಂದು ವರ್ಷದಲ್ಲಿ ಚಿನ್ನದ ಗಣಿಯನ್ನು ಪುನರಾರಂಭಿಸಲಾಗುತ್ತದೆ ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪಿಎಂಇಜಿ ಯೋಜನೆಯಡಿ ದೇಶದ 650 ಜಿಲ್ಲೆಗಳಲ್ಲಿ ಯುವಕರಿಗೆ ಜಿಲ್ಲಾಡಳಿತ ನೀಡಿದ ಪಟ್ಟಿಯನ್ವಯ 1 ಲಕ್ಷ ಜನರಿಗೆ ಉದ್ದಿಮೆ ಸ್ಥಾಪಿಸಲು ಮುಂದೆರಡು ತಿಂಗಳೊಳಗೆ ಅನುದಾನ ಬಿಡುಗಡೆ ಮಾಡಲು ಬ್ಯಾಂಕ್ಗಳು ಒಪ್ಪಿಗೆ ಸೂಚಿಸಿದ್ದು, ಸರ್ಕಾರ ಇಂತಹ ಯೋಜನೆಗಳಿಗೆ ಸಬ್ಸಿಡಿ ಇತರೆ ಅನುದಾನ ಬಿಡುಗಡೆ ಮಾಡಲಿದೆ ಎಂದರು. ಇದೇ ಸಂದರ್ಭದಲ್ಲಿ ಅರ್ಹಫಲಾನುಭವಿಗಳಿಗೆ ಸಾಲಗಳ ಚೆಕ್ ವಿತರಿಸಿದರು.
ಕೆಜಿಎಫ್ ಶಾಸಕಿ ವೈ. ರಾಮಕ್ಕ ಮಾತನಾಡಿ, ಕ್ಷೇತ್ರದ ದಲಿತ, ಅಲ್ಪಸಂಖ್ಯಾತರಿಗೆ ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಕಲ್ಪಿಸಿಕೊಡಬೇಕು. ರೈತರಿಗೆ, ಗ್ರಾಮಸ್ಥರಿಗೆ ಬ್ಯಾಂಕ್ನಿಂದ ಸಾಲ ನೀಡುವ ಕೆಲಸ ಮಾಡಬೇಕು ಎಂದರು.
ಕೆನರಾ ಬ್ಯಾಂಕ್ ಕೇಂದ್ರೀಯ ವಿಭಾಗಾಧಿಕಾರಿ ಸಂಪತ್ಕುಮಾರ್, ಮಾಜಿ ಶಾಸಕ ವೈ. ಸಂಪಂಗಿ, ರೂಪಕಲಾ, ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ ಇದ್ದರು.
ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ; ಸಚಿವರ ಗರಂ
ಚಿಂತಾಮಣಿ: ಜನರಿಗೆ ಬ್ಯಾಂಕ್ಗಳಿಂದ ದೊರೆಯುವ ಸಾಲಗಳ ಬಗ್ಗೆ ಅರಿವು ಮೂಡಿಸದೆ ಗೈರು ಹಾಜರಿಯಾದ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಗರಂ ಆದರು. ಬೂರಗಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬ್ಯಾಂಕ್ ಮತ್ತು ಗ್ರಾಹಕರ ಸಮಾವೇಶಕ್ಕೆ ಬ್ಯಾಂಕ್ ಆಫ್ ಇಂಡಿಯಾ, ಐಎನ್ಜಿ ವೈಶ್ಯ, ಅಪೆಕ್ಸ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳ ವ್ಯವಸ್ಥಾಪಕರು ಗೈರು ಹಾಜರಿಯಾದ ಬಗ್ಗೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಜಿಲ್ಲಾ ಆಡಳಿತ ಮತ್ತು ಲೀಡ್ ಬ್ಯಾಂಕ್ ಹಾಗೂ ತಾಲೂಕು ಬ್ಯಾಂಕ್ಗಳ ಮತ್ತು ಗ್ರಾಹಕರ ಸಮಾವೇಶದಲ್ಲಿ ಅಧಿಕಾರಿಗಳು ಹಾಗೂ ಶಾಸಕರ ಭಾಷಣದ ನಂತರ ಕಾರ್ಯಕ್ರಮ ಉದ್ಘಾಟಿಸಿ ಹಾಸ್ಯಕ್ಕೀಡಾದರು. ಲೀಡ್ ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾದರು.
ಚಿನ್ನದ ಗಣಿ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ಬಿಜಿಎಂಎಲ್ ಚಿನ್ನದ ಗಣಿಯನ್ನು ಪರುನಶ್ಚೇತನಗೊಳಿಸಲು ಮುಂಬರುವ ಮಾರ್ಚ್ ತಿಂಗಳಲ್ಲಿ ಜಾಗತಿಕ ಗ್ಲೋಬಲ್ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ ಒಂದು ವರ್ಷದಲ್ಲಿ ಚಿನ್ನದ ಗಣಿಯನ್ನು ಪುನರಾರಂಭಿಸಲಾಗುತ್ತದೆ
- ಕೆ.ಎಚ್. ಮುನಿಯಪ್ಪ, ಕೇಂದ್ರ ಸಚಿವ