ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಾಸ್ಟೆಲ್‌ನಲ್ಲಿ ಊಟಕ್ಕಾಗಿ ವಿದ್ಯಾರ್ಥಿಗಳ ಪರದಾಟ

Vishwanath S
Updated On : 5 Feb 2014, 12:09 pm

ಕನ್ನಡಪ್ರಭ ವಾರ್ತೆ, ಕೋಲಾರ, ಫೆ.4
ನಗರದ ಅಂತರಗಂಗೆ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳು ಊಟ ಇಲ್ಲದೆ ಪರದಾಡಿ ತಮ್ಮ ಗೋಳನ್ನು ಜಿಲ್ಲಾಧಿಕಾರಿಗಳ ಬಳಿ ತೋಡಿಕೊಂಡ ಘಟನೆ ಮಂಗಳವಾರ ನಡೆಯಿತು.
ಹಾಸ್ಟೆಲ್‌ನ ಸುಮಾರು 60 ಮಂದಿ ವಿದ್ಯಾರ್ಥಿಗಳು ಎಸ್‌ಎಫ್‌ಐ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಹಾಸ್ಟೆಲ್ ವಾರ್ಡನ್ ಅವಾಂತರಗಳಿಂದಾಗಿ ನಮಗೆ ಊಟ ಇಲ್ಲದಂತಾಗಿದೆ. ಸಮಸ್ಯೆ ನಿವಾರಣೆ ಮಾಡುವವರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದರು.
ವಿದ್ಯಾರ್ಥಿಗಳ ಸಮಸ್ಯೆ ಅಲಿಸಿದ ಜಿಲ್ಲಾಧಿಕಾರಿ ಡಿ.ಕೆ. ರವಿ ತಾವು ಇಲ್ಲಿ ಕೂರುವುದರಿಂದ ಪ್ರಯೋಜನವಿಲ್ಲ, ನಾನೇ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಹಾರ ಕಲ್ಪಿಸುತ್ತೇನೆಂದು ತಿಳಿಸಿದರು. ವಿದ್ಯಾರ್ಥಿಗಳು ಹಾಸ್ಟೆಲ್ ಸೇರುತ್ತಿದ್ದಂತೆ ಅಲ್ಲಿಗೆ ಆಗಮಿಸಿದ ಜಿಲ್ಲಾಧಿಕಾರಿಗಳು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಉಮಾದೇವಿಯವನ್ನು ಕರೆಸಿಕೊಂಡು ಹಾಸ್ಟೆಲ್ ಅವ್ಯವಸ್ಥೆ ಕಂಡು ಗರಂ ಆದರು.
ಹಾಸ್ಟೆಲ್ ವಾರ್ಡನ್ ನಾರಾಯಣಸ್ವಾಮಿ ವಿರುದ್ಧ ವಿದ್ಯಾರ್ಥಿಗಳು ದೂರಿದಾಗ, ತಕ್ಷಣ ದೂರವಾಣಿ ಮುಖೇನ ಸಂಪರ್ಕಿಸಿದರು. ಚಿಂತಾಮಣಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದಾಗ, ಮತ್ತಷ್ಟು ಕುಪಿತರಾದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡದೆ ಅನಧಿಕೃತವಾಗಿ ಗೈರು ಹಾಜರಾಗಿದ್ದೀರಾ, ಹಾಸ್ಟೆಲ್  ಸುಧಾರಣೆಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದರೂ ಅವ್ಯವಸ್ಥೆಗಳು ನಿಂತಿಲ್ಲವೆಂದು ತರಾಟೆಗೆ ತೆಗೆದುಕೊಂಡರು.
ನಂತರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರನ್ನು ಕರೆಸಿಕೊಂಡು, ಹಾಸ್ಟೆಲ್ ವಾರ್ಡನ್ ನಾರಾಯಣಸ್ವಾಮಿ ಚಿಂತಾಮಣಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
 ಇದು ನಿಜವೇ ಎಂಬುದನ್ನು ಪತ್ತೆ ಮಾಡಿ, ಒಂದು ವೇಳೆ ಚಿಂತಾಮಣಿಯಲ್ಲಿ ಇದ್ದರೆ ಕೇಸು ಬೇಡ, ಬೇರೆ ಕಡೆ ಇದ್ದರೆ ವಾರ್ಡನ್ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿ, ವಾರ್ಡನ್ ಮೊಬೈ ನಂಬರ್ ಅನ್ನು ನೀಡಿದರು.
ಒಂದು ವೇಳೆ ವಾರ್ಡನ್ ಸುಳ್ಳು ಹೇಳಿದ್ದಲ್ಲಿ ತಾವು ಪ್ರತ್ಯೇಕವಾಗಿ ಪೊಲೀಸರಿಗೆ ಲಿಖಿತವಾಗಿ ದೂರು ನೀಡಿ, ನಿಮಗೆ ಊಟದ ವ್ಯವಸ್ಥೆ ಮಾಡಲಾಗುವುದು, ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ವ್ಯವಸ್ಥೆ ಮಾಡಲಿದ್ದರೆಂದು ತಿಳಿಸಿದರು.
ಹಾಸ್ಟೆಲ್ ವಾರ್ಡನ್ ನಾರಾಯಣಸ್ವಾಮಿ ಅವರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ತಾವು ಇತ್ತೀಚೆಗೆ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾಗ ವಾರ್ಡನ್ ವಿದ್ಯುತ್ ಶಾಕ್‌ನಿಂದ ತಾವು ಸಾಯಬೇಕೆಂದು ಬಯಸಿದ್ದರೆಂದು ಆರೋಪಿಸಿದರು.
ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಗಳು, ಇಂತಹ ವಾರ್ಡನ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ, ತಕ್ಷಣ ವರದಿ ನೀಡುವಂತೆ ಸೂಚಿಸಿದರು.
 ಜಿಲ್ಲಾಧಿಕಾರಿಗಳು ಕೊಟ್ಟ ಮಾತಿನಿಂತೆ ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿಗಳ ಸಮಸ್ಯೆ ನಿವಾರಣೆ ಮಾಡಿದಕ್ಕಾಗಿ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ವಿ.ಅಂಬರೀಶ್, ಜಿಲ್ಲಾ ಅಧ್ಯಕ್ಷ ವಾಸುದೇವರೆಡ್ಡಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement