ನಿರ್ವಹಣೆ ಇಲ್ಲದೆ ಬಡವಾದ ಎಕೋ ಪಾರ್ಕ್
ಬಾಗೇಪಲ್ಲಿ: ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪಟ್ಟಣದ ಹೊರವಲಯದ ಚಿತ್ರಾವತಿ ಎಕೋ ಪಾರ್ಕ್(ಉದ್ಯಾನವನ) ಅನೈತಿಕ ಚಟುವಟಿಕೆಗಳ ತಂಗುದಾಣವಾಗಿ ಪರಿವರ್ತನೆಯಾಗುತ್ತಿದೆ.
ಪಟ್ಟಣದ ಹೊರವಲಯದ ಘಂಟಂವಾರಿಪಲ್ಲಿ ಗ್ರಾಪಂ ವ್ಯಾಪ್ತಿಯ ಚಿತ್ರಾವತಿ ನದಿ ದಡದಲ್ಲಿನ ಇತಿಹಾಸಿಕ ಪ್ರಸಿದ್ಧ ಜಡಲಬೈರವೇಶ್ವರ ದೇವಾಲಯದ ಬಳಿ 2004 ರಲ್ಲಿ ಸುಮಾರು 8 ಏಕರೆ 20 ಕುಂಟೆ ಪ್ರದೇಶದಲ್ಲಿ ಚಿತ್ರಾವತಿ ಎಕೋ ಪಾರ್ಕ್ಗೆ ಭೂಮಿ ಪೂಜೆ ಮಾಡಲಾಗಿತ್ತು. ನಂತರ ಈ ಉದ್ಯಾನವನವನ್ನು ಲಕ್ಷಾಂತರ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 2012ರಲ್ಲಿ ಸಾರ್ವಜನಿಕರಿಗೆ ಲೋಕಾರ್ಪಾಣೆ ಮಾಡಲಾಯಿತು. ಈ ಉದ್ಯಾನವನದ ನಿರ್ವಹಣೆಯನ್ನು ಪುರಸಭೆಗೆ ವಹಿಸಲಾಗಿತ್ತು. ಆದರೆ ಪುರಸಭೆಯ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡವಲ್ಲಿ ವಿಫಲರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಉದ್ಯಾನವನದ ಹಾಸು ಹುಲ್ಲು ಮತ್ತು ಹೂವಿನ ಗಿಡಗಳಿಗೆ ಸಮರ್ಪಕವಾಗಿ ನೀರು ಹರಿಸದ ಪರಿಣಾಮ ಬಾಡಿವೆ. ವಾಯುವಿಹಾರಿಗಳ ಸಂಚಾರಕ್ಕಾಗಿ ನಿರ್ಮಿಸಿರುವ ಪಾದಚಾರಿ ಮಾರ್ಗದ ಸ್ಲಾಬ್ಗಳು ಮುರಿದಿದೆ, ಮಕ್ಕಳ ಆಟ ಸಾಮಗ್ರಿಗಳು ಮುರಿದಿವೆ. ಇಲ್ಲಿ ಕೊಳವೆಬಾವಿ ಇದೆ. ಸುಂದರ ಹೂಗಿಡಗಳು,ಚಿಲುಮೆ, ವಾಯುವಿಹಾರಿಗಳ ಸಂಚಾರಕ್ಕೆ ಸ್ಲಾಬ್ಗಳು, ವಿಶ್ರಾಂತಿ ತಾಣಗಳು, ನೀರಿನ ಪೈಪ್ ಲೈನ್ ಇದೆ. ಆದರೆ ಗಿಡಗಳಿಗೆ ಸಮರ್ಪಕವಾಗಿ ನೀರು ಒದಗಿಸದ ಕಾರಣ ಗಿಡಗಳು ಒಣಗುತ್ತಿದ್ದರೆ, ಚಿಲುಮೆ(ಕಾರಂಜಿ) ಯಲ್ಲಿ ನೀರು ಇಲ್ಲದ ಪರಿಣಾಮ ವೀಕ್ಷಿಸಲು ಬರುತ್ತಿದ್ದ ಸಾರ್ವಜನಿಕರು ನಿರಾಶೆಯಿಂದ ಹೋಗಬೇಕಾಗಿದೆ.
ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಈ ಉದ್ಯಾನವನದಲ್ಲಿ ಕಾಂಗ್ರೆಸ್ ಗಿಡಗಳು ಬೆಳೆದಿರುವುದರಿಂದ ಹಾವು ಚೇಳುಗಳ ಕಾಟ ಹೆಚ್ಚಾಗಿದೆ. ಇದರಿಂದ ಮಕ್ಕಳನ್ನು ಈ ಉದ್ಯಾನ ವನಕ್ಕೆ ಕರೆತರಲು ಪೋಷಕರು ಹಿಂಜರಿಯುತ್ತಾರೆ. ವಾಯು ವಿಹಾರ ಸಂಚಾರಿಗಳಿಗಾಗಿ ನಿರ್ಮಿಸಿರುವ ನೆಲ ಹಾಸು ಕಳಪೆ ಮಟ್ಟದಲ್ಲಿ ನಿರ್ಮಿಸಿರುವುದರಿಂದ ಮೇಲಕ್ಕೆ ಬಂದಿವೆ. ಈ ಉದ್ಯಾನವನ ಪ್ರಾರಂಭಿಸುವ ಹಾಗೂ ಭೂಮಿ ಪೂಜೆ ಮಾಡಿರುವಂತಹ ಶಿಲಾನ್ಯಾಸಗಳು ಮುರಿದಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗು ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಈ ಉದ್ಯಾನವನದ ರಕ್ಷಣೆಗಾಗಿ ಒಬ್ಬ ಕಾವಲುಗಾರ ಇದ್ದರೂ ಇಲ್ಲದಂತಾಗಿದೆ. ಪ್ರತಿ ದಿನ ರಾತ್ರಿ ಸಮಯದಲ್ಲಿ ಕೆಲವರು ಕುಡಿದು ವಿಶ್ರಾಂತಿ ತಾಣಗಳಲ್ಲಿ ಮಧ್ಯದ ಬಾಟಲ್, ಗ್ಲಾಸ್, ಸಿಗರೇಟ್ ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳನ್ನು ಬೀಸಾಡಿರುವುದಿಂದ ವಿಶ್ರಾಂತಿ ಗೃಹಗಳು ದುರ್ವಾಸನೆಯಿಂದ ಕೂಡಿದೆ. ವಾಯುವಿಹಾರಿ ಹಾಗೂ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲವಾಗಿದೆ. ಮುಖ್ಯದ್ವಾರದ ಗೇಟು ಮುರಿದಿದೆ. ಸೆಕ್ಯೂರಿಟಿಗಾಗಿ ನಿರ್ಮಿಸಿರುವ ವಿಶ್ರಾಂತಿ ಕೊಠಡಿಗೆ ಪ್ರತಿದಿನ ಬೀಗ ಜಡಿಯಲಾಗಿದ್ದು ಪುರಸಭೆ ಅಧಿಕಾರಿಗಳು ಇತ್ತ ನಿಗಾ ವಹಿಸಿ ಈ ಉದ್ಯಾನವನದಲ್ಲಿ ನಡೆಯುತ್ತಿರುವ ಅನೈತಿ ಚಟುವಟಿಕೆಗಳಿಗೆ ಕಾಡಿವಾಣ ಹಾಕಬೇಕಾಗಿದೆ. ಗಿಡಗಳಿಗೆ ನೀರು ಸಮರ್ಪಕವಾಗಿ ಹರಿಸುವ ಹಾಗೂ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡನ್ನು ನೇಮಿಸಬೇಕಾಗಿದೆ. ಗಿಡಗಳಿಗೆ ನೀರು, ಆಟದ ಪರಿಕರಗಳನ್ನು, ಸ್ಲಾಬ್ಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.