ಮಾಮರದ ಹೂವಿನ ಗಮ್ಮತ್ತು, ತೇವಾಂಶದ ಕೊರತೆ ಆಪತ್ತು
ಕೋಲಾರ: ವಿಶ್ವಕ್ಕೆ ವಿವಿಧ ತಳಿಗಳ ಮಾವು ಸರಬರಾಜು ಮಾಡುವ ಮೂಲಕ ಕೋಲಾರ ಜಿಲ್ಲೆಯ ಹೆಸರುವಾಸಿಯಾಗಿದೆ. ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಕೈ ಸೇರದೆ ರೈತರು ಲಾಭ ಗಳಿಸಲು ಆಗಿರಲಿಲ್ಲ. ಈ ಬಾರಿ ಮರಗಳಲ್ಲಿ ಹೂವು ಬೆಳೆದಿರುವುದರಿಂದ ರೈತರು ಸಂತಸ ಪಡುವಂತಾಗಿದೆಯಾದರೂ ಭೂಮಿಯಲ್ಲಿ ತೇವಾಂಶದ ಕೊರತೆ ಉಂಟಾಗಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ಮಾವು ಶ್ರೀನಿವಾಸಪುರ ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಕೋಲಾರದಲ್ಲಿ ಕೆಲವು ವರ್ಷಗಳಿಂದ ರೈತರು ಮಾವು ಬೆಳೆಯಲಾರಂಭಿಸಿದ್ದಾರೆ. ಮಾವು ಕೋಲಾರ ಜಿಲ್ಲೆಗೆ ಹೇಳಿ ಮಾಡಿಸಿದ ಬೆಳೆಯಾಗಿದೆ. ಉಷ್ಣ ವಲಯ ಮಾವು ಬೆಳೆಗೆ ಸೂಕ್ತವಾಗಿದ್ದು ಇಲ್ಲಿನ ಮಣ್ಣಿನಲ್ಲಿ ವಿವಿಧ ತಳಿಗಳನ್ನು ಸಮೃದ್ಧವಾಗಿ ಬೆಳೆಯಬಹುದಾಗಿದೆ.
ಜಿಲ್ಲೆಯ ಬಹುತೇಕ ಪ್ರದೇಶದಲ್ಲಿ ಮಾವು ಚಿಗುರಿದ್ದು ಮರಗಳಲ್ಲಿ ಹೂವಿನ ಗಮ್ಮತ್ತು ಘಮಿಸುವಂತಾಗಿದೆ. ತೋಟಗಳಲ್ಲಿ ಮಾವಿನ ಗಿಡಗಳಿಗೆ ಪ್ರಕೃತಿಯೇ ಹೂವಿನ ಆಲಂಕಾರ ಮಾಡಿ ರೈತರನ್ನು ಮಾತ್ರವಲ್ಲ, ಮಾವು ಪ್ರಿಯರನ್ನು ಆಕರ್ಷಿಸುವಂತೆ ಮಾಡಿದೆ. ಆದರೆ. ಮಳೆಯಿಲ್ಲದೆ ತೇವಾಂಶ ಕಡಿಮೆ ಆಗಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಸಿಗುವ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸುತ್ತಿದ್ದು ಪ್ರಕೃತಿ ಕೈಕೊಡದಿರಲಿ ಎಂದು ರೈತರು ದೇವರ ಮೊರೆ ಹೋಗಿದ್ದಾರೆ.
45 ಹೆಕ್ಟೇರ್ ಪ್ರದೇಶ: ರಾಜ್ಯದಲ್ಲಿ ಸುಮಾರು 1.62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು. ಇದರಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶ ಕೋಲಾರ ಜಿಲ್ಲೆಯೊಂದರಲ್ಲೇ ಇದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಮಾವು ಅಧಿಕವಾಗಿ ಬೆಳೆಯುತ್ತಿದ್ದರೂ ಕೋಲಾರ ಆಗ್ರಸ್ಥಾನದಲ್ಲಿ ಇರುವುದು ಹೆಮ್ಮೆಯ ವಿಚಾರವಾಗಿದೆ.
ಕೋಲಾರ ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್, ರಾಮನಗರ -22 ಸಾವಿರ, ಚಿಕ್ಕಬಳ್ಳಾಪುರ-13 ಸಾವಿರ, ಧಾರವಾಡ- 8 ಸಾವಿರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ - 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಒಂದರಲ್ಲೇ 25 ಸಾವಿರ ಹೆಕ್ಟೇರ್ಪ್ರ್ದೇಶದಲ್ಲಿ ರಸಪುರಿ, ಬಾದಾಮಿ, ನೀಲಂ, ಬೇನಿಷಾ, ತೋತಾಪುರಿ, ಮಲ್ಲಿಕಾ ಮುಂತಾದ ತಳಿಗಳ ಮಾವು ಬೆಳೆದರೆ, ಮುಳಬಾಗಲಿನಲ್ಲಿ 10 ಸಾವಿರ ಹೆಕ್ಟೇರ್ ಹಾಗೂ ಇನ್ನುಳಿದ ತಾಲೂಕುಗಳಲ್ಲಿ 5 ರಿಂದ 8 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆಯುತ್ತಿದ್ದಾರೆ.
ಮಾವು ಡಿಸೆಂಬರ್ನಿಂದ ಜನವರಿ ಅವಧಿಯಲ್ಲಿ ಹೂವು ಬಿಡಲು ಪ್ರಾರಂಭಿಸುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.50ರಷ್ಟು ಭಾಗ ಹೂವು ಬಿಟ್ಟಿದ್ದು, ಈ ತಿಂಗಳ ಅಂತ್ಯಕ್ಕೆ ಬಹುತೇಕ ಮರಗಳಲ್ಲಿ ಹೂವು ಬೆಳೆಯುವುದರಿಂದ ನಂತರದ ದಿನಗಳಲ್ಲಿ ಮರಗಳಲ್ಲಿ ಕಾಯಿಗಳ ದರ್ಶನ ಕಾಣಬಹುದಾಗಿದೆ. ಆದರೆ ಬಾದಾಮಿ ತಳಿಯ ಗಿಡಗಳಲ್ಲಿ ಹೂವು ಹೆಚ್ಚು ಬಿಟ್ಟಿದ್ದು, ಬೇನಿಷಾ, ತೋತಾಪುರಿ, ಮಲ್ಲಿಕಾ ತಳಿಯ ಮರಗಳಲ್ಲಿ ಹೂವಿನ ಪ್ರಮಾಣ ಕಡಿಮೆಯಾಗಿದೆ. ಕೆಲವು ಕಡೆ ಅವಧಿಗೆ ಮುಂಚೆಯೇ ಮರಘಲ್ಲಿ ಹೂವು ಬಿಟ್ಟಿರುವುದರಿಂದ ಹಂಗಾಮಿನಲ್ಲಿ ಹೂವು ಬಿಡುವುದು ಅನುಮಾನವೆಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನೀರಿನ ಸೌಕರ್ಯವಿರುವ ತೋಟಗಳಲ್ಲಿ ಮರಗಳು ಆರೋಗ್ಯಕರವಾಗಿರುತ್ತದೆ, ತೇವಾಂಶದ ಕೊರತೆ ಇರುವ ಭೂಮಿಗಳಲ್ಲಿನ ಮರದಲ್ಲಿ ಹೂವಿನ ಗೊಂಚಲು ಪ್ರಮಾಣ ಕಡಿಮೆ ಆಗುವುದರಿಂದ ಉತ್ತಮ ಹಾಗೂ ಗುಣಮಟ್ಟದ ಫಸಲು ನಿರೀಕ್ಷೆ ಮಾಡಲು ಕಷ್ಟವಾಗುತ್ತದೆ. ಆದರೆ. ಪ್ರಕೃತಿಯು ಯಾವುದೇ ಸಮಸ್ಯೆ ಉಂಟು ಮಾಡದಿದ್ದಲ್ಲಿ ಕಳೆದ ವರ್ಷಕ್ಕಿಂತ ಕೊಂಚ ಹೆಚ್ಚು ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.