ಜಿಲ್ಲಾ ಆಡಳಿತಕ್ಕೆ ಸವಾಲಾಗಿರುವ ಪ್ರಕರಣ
ಕನ್ನಡಪ್ರಭ ವಾರ್ತೆ , ಕೋಲಾರ , ಫೆ.6
ತಾಲೂಕಿನ ಶ್ಯಾನಭೋಗನಹಳ್ಳಿಯಲ್ಲಿ ಸಣ್ಣದೊಂದು ಭೂಮಿಯ ವಿವಾದ ಇತ್ಯರ್ಥಕ್ಕೆ ಕಳೆದ ಒಂದು ವಾರದಿಂದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು, ಗ್ರಾಮಸ್ಥರು ನಡೆಸುತ್ತಿರುವ ಪ್ರಯತ್ನಕ್ಕೆ ನಡೆದ ಸಂಧಾನ ವಿಫಲವಾರಿಗರುವುದರಿಂದ ಜಿಲ್ಲಾ ಆಡಳಿತದ ನೆಮ್ಮದಿಗೆ ಭಂಗ ಎದುರಾಗಿದೆ.
ಕಾನೂನು ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಸಮಯ ಹಿಡಿಯುತ್ತದೆ, ಕೋರ್ಟ್ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳು ವಿವಾದವನ್ನು ಸೌಹಾರ್ದ ಮಾತುಕತೆ ಮೂಲಕ ಬಗೆಹರಿಸಿ ಶಾಂತಿ ಕಾಪಾಡಲು ಪ್ರಯತ್ನ ನಡೆಸುತ್ತಿದ್ದಾರೆಯಾದರೂ ವ್ಯಕ್ತಿ ಪ್ರತಿಷ್ಠೆ, ದರ್ಪ, ಅನುಮಾನ,ಅಸಮಾಧಾನ ಹಾಗೂ ಸೇಡಿನಿಂದಾಗಿ ಕಗ್ಗಂಟಾಗಿರುವ ವಿವಾದ ಬಗೆಹರಿಯಲು ಕಷ್ಟವಾಗಿರುವುದರಿಂದ ಜಿಲ್ಲಾಧಿಕಾರಿಗಳು ವಿವಾದ ಸಿವಿಲ್ ಕೋರ್ಟಿನಲ್ಲಿ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡಲು ಸಿಆರ್ಪಿಸಿ 145,146,147 ಕಾಯಿದೆ ಜಾರಿ ಮಾಡುವಂತಾಗಿದೆ.ಶ್ಯಾನಭೋಗನಹಳ್ಳಿಯಲ್ಲಿ ಶಂಕರಪ್ಪ ಎಂಬುವರು ತನ್ನ ಮನೆ ಬಳಿ ಹಾದು ಹೋಗಿರುವ ರಸ್ತೆ ತನ್ನದೆಂದು ಕಲ್ಲು ಚಪ್ಪಡಿಗಳನ್ನು ನೆಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಈ ಜಾಗ ದೇವಾಲಯಕ್ಕೆ ಸೇರಿದ್ದು ಒತ್ತುವರಿ ತೆರವುಗೊಳಿಸುವಂತೆ ತೀರ್ಮಾನ ಕೈಗೊಂಡ ನಂತರ ಉಂಟಾದ ಬೆಳವಣಿಗೆ, ಶಂಕರಪ್ಪ ಗ್ರಾಮದ ಕೆಲವರ ಮೇಲೆ ದಾಖಲಿಸಿದ ಅಟ್ರಾಸಿಟಿ ಕೇಸು, ಇದರಿಂದ ಗ್ರಾಮಸ್ಥರು ಶಂಕರಪ್ಪ ಮತ್ತವರ ಕುಟುಂಬದ ವಿರುದ್ಧ ಸಾಮೂಹಿಕವಾಗಿ ವಿರೋಧ ವ್ಯಕ್ತಪಡಿಸಿದ ಘಟನೆಗಳಿಂದಾಗಿ ಗ್ರಾಮದಲ್ಲಿದ್ದ ಶಾಂತಿ-ಸೌಹಾರ್ದತೆಗೆ ಭಂಗ ಉಂಟಾಗಲು ಕಾರಣವಾಗಿದೆ.
ಗ್ರಾಮದಲ್ಲಿನ ಐಕ್ಯತೆಯನ್ನು ಧಿಕ್ಕರಿಸಿ ದಲಿತ ಜನಾಂಗಕ್ಕೆ ಸೇರಿದ ಶಂಕರಪ್ಪ ಸಣ್ಣ ವಿವಾದವನ್ನು ದೊಡ್ಡದು ಮಾಡಿ ಸುಳ್ಳು ಕೇಸುಗಳನ್ನು ಹಾಕಿ ನಾವು ಜೈಲಿಗೆ ಹೋಗುವಂತೆ ಮಾಡಿದ್ದಾರೆಂಬುದು ಜನರ ದೂರಾದರೆ, ತಮ್ಮ ಕುಟುಂಬವನ್ನು ಬೀದಿ ಪಾಲು ಮಾಡಿದ್ದಾರೆ, ಭೂಮಿ ಕಬಳಿಸಲು ಯತ್ನಿಸಿದ್ದಾರೆಂದು ಆರೋಪಿಸಿ, ಯಾವುದೇ ಕಾರಣಕ್ಕೂ ರಸ್ತೆ ಬಿಟ್ಟುಕೊಡುವುದಿಲ್ಲವೆಂದು ಪಟ್ಟು ಹಿಡಿದಿರುವುದು ಸಮಸ್ಯೆ ಇನ್ನಷ್ಟು ಜಟಿಲವಾಗಲು ಕಾರಣವಾಗಿದೆ.
ಊರಿನ ಜನರು ಶಂಕರಪ್ಪ ಬಳಿ ಪ್ರೀತಿಯಿಂದ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು, ಈಗಲೂ ಕಾಲ ಮಿಂಚಿಲ್ಲ, ಕಹಿ ಘಟನೆಗಳನ್ನು ಇಬ್ಬರು ಮರೆತು ಊರಿನ ಹಿತದೃಷ್ಟಿಯಿಂದ ಒಂದಾಗಿ, ಕಾನೂನು ಕ್ರಮಗಳಿಂದ ಎಲ್ಲವೂ ಬಗೆಹರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಶಂಕರಪ್ಪನಿಗೆ ಗ್ರಾಮಸ್ಥರಿಂದ ತೊಂದರೆ ಆಗಿದ್ದರೆ ವಿಷಾಧ ವ್ಯಕ್ತಪಡಿಸುವುದರಲ್ಲಿ ತಪ್ಪೇನು ಇಲ್ಲ. ಅದೇ ರೀತಿ ಹಠ, ಪ್ರತಿಷ್ಠೆ, ಅನಮಾನಗಳನ್ನು ಬಿಟ್ಟು ಊರಿನ ಒಳಿತಿಗಾಗಿ ಚಿಂತನೆ ಮಾಡಿದಲ್ಲಿ ತಾವು ಲೀಡರ್ ಆಗ್ತೀರಾ ಎಂದು ಜಿಲ್ಲಾಧಿಕಾರಿ ಪರಿ ಪರಿಯಾಗಿ ಕೇಳಿಕೊಂಡರು ಶಂಕರಪ್ಪ ಜಾಗವನ್ನು ಬಿಟ್ಟುಕೊಡಲು ಒಪ್ಪದಿರುವುದರಿಂದ ಸಮಸ್ಯೆ ನಿವಾರಣೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಈ ಪ್ರಕರಣದ ಸಂಪೂರ್ಣ ಮಾಹಿತಿ ಹೊಂದಿರುವ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಹ ಸಮಸ್ಯೆ ನಿವಾರಣೆ ಮಾಡಲು ನಡೆದ ಪ್ರಯತ್ನಗಳು ವಿಫಲವಾಗಿವೆ, ಜನಪ್ರತಿನಿಧಿಗಳು ಇದು ನಮಗೆ ಸಂಬಂಧಿಲ್ಲವೆಂದು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಶಂಕರಪ್ಪನವರಿಗೆ ವಾಸ್ತವ ಸಂಗತಿಗಳನ್ನು ತಿಳಿಸಿ ಆತನಲ್ಲಿ ಊದುಗಿರುವ ಅನುಮಾನ,ಅಸಮಾಧಾನ ನಿವಾರಣೆ ಮಾಡಲು ಪ್ರಯತ್ನಿಸದೆ ಕೆಳ ಹಂತದ ಅಧಿಕಾರಿಗಳು ಸೃಷ್ಟಿಸಿದ ಅವಾಂತರದಿಂದ ಜಿಲ್ಲಾಧಿಕಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಂಧಾನಕ್ಕೆ ಬರಬೇಕಾಯಿತು, ಇಲ್ಲಿನ ಘಟನೆಗಳಿಂದ ಮುಜುಗರಕ್ಕೆ ಒಳಗಾಗಬೇಕಾಯಿತು, ಯಾರೋ ಮಾಡಿರುವ ತಪ್ಪಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ವಿಷಾಧ ವ್ಯಕ್ತಪಡಿಸಿರುವುದು ಸರಿಯಲ್ಲವೆಂದು ಸಾಮಾಜಿಕ ಹೋರಾಟಗಾರ ಸಿ.ವಿ.ನಾಗರಾಜ್ ಅಭಿಪ್ರಾಯಿಸಿದ್ದಾರೆ.
ಶಂಕರಪ್ಪಗೆ ನಿಜಕ್ಕೂ ಸಮಸ್ಯೆ ನಿವಾರಣೆ ಆಗಬೇಕೆಂಬ ಉದ್ದೇಶವಿದ್ದಲ್ಲಿ ರಚನಾತ್ಮಕವಾದ ಪರಿಹಾರ ಸೂಚಿಸಲಿ, ಗ್ರಾಮದ ಹಿತಕ್ಕೆ ಪೂರಕವಾದ ಸಲಹೆ ಸ್ವೀಕರಿಸಿ ಮಾದರಿ ಮುಖಂಡರಾಗಲಿ, ವ್ಯಕ್ತಿ,ಕಾನೂನಿಗಿಂತ ಸಂವಿಧಾನ ಮುಖ್ಯ,ಶಂಕರಪ್ಪನವರಿಗೆ ನಿಜಕ್ಕೂ ಅಂಬೇಡ್ಕರ್ ಬಗ್ಗೆ ಗೌರವ, ನಂಬಿಕೆ ಇದ್ದಲ್ಲಿ ಸಮಾಜದ ಒಳತಿಗಾಗಿ ಸೋಲು ಒಪ್ಪಿಕೊಂಡರೆ ದೊಡ್ಡ ವ್ಯಕ್ತಿಯಾಗುತ್ತಾರೆಂದು ಸಲಹೆ ನೀಡಿದ್ದಾರೆ.
ಗ್ರಾಮದ ಜನರು ಸೇಡಿನ ಮನೋಭಾವನೆ ಬಿಟ್ಟು ಸೌಹಾರ್ದತೆಯತ್ತ ಗಮನ ನೀಡಬೇಕು, ಜಿಲ್ಲಾಧಿಕಾರಿಗಳ ಕ್ರಮಕ್ಕೆ ತಲೆ ಬಾಗಬೇಕು, ಸಿವಿಲ್ ಕೋರ್ಟ್ಗೆ ಹೋಗುವುದರಿಂದ ಆಗುವ ಲಾಭ-ನಷ್ಟಗಳ ಬಗ್ಗೆ ಗ್ರಾಮದ ಕಟ್ಟೆಯಲ್ಲಿ ಚರ್ಚಿಸಿ ಕೊಟ್ಟು-ತೆಗೆದುಕೊಳ್ಳುವ ರಾಜಿ ಸೂತ್ರಕ್ಕೆ ಬದ್ಧರಾಗದಿದ್ದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲವೆಂದು ಮಾರ್ಮಿಕವಾಗಿ ನುಡಿದಿದ್ದಾರೆ.