ಪುನರ್ವಸತಿ ಕಾರ್ಯಕರ್ತರಿಗೆ ಸೇವಾ ಭದ್ರತೆಗೆ ಒತ್ತಾಯ
ಕೋಲಾರ: ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸೇವಾ ಭದ್ರತೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಜಿಲ್ಲಾ ವಿವಿದ್ದೋದ್ದೇಶ ಗ್ರಾಮೀಣ ಪುನರ್ವ್‌ಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡ್ಲ್ಯೂ ರವರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು, ಸೇವಾ ಭದ್ರತೆ ಮತ್ತು ಆರೋಗ್ಯ ವಿಮೆ, ಭವಿಷ್ಯ ನಿಧಿ ಒದಗಿಸಬೇಕೆಂದು ಕೋರಿ ಅಪರ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮಾಂತರ ಪ್ರದೇಶದ ಅವಕಾಶ ವಂಚಿತ ವಿಕಲಚೇತನರ ಸೇವೆ ಮಾಡಲು ಸರ್ಕಾರದ ವತಿಯಿಂದ ಉಚಿತ ಬೈಕ್ ವ್ಯವಸ್ಥೆ ಮಾಡಿಕೊಡಬೇಕು, ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಸರ್ಕಾರ ಮನೆಗಳನ್ನು ಮಂಜೂರು ಮಾಡಬೇಕು, ಖಾಲಿಯಿರುವ ಬಿಲ್ ಕಲೆಕ್ಟರ್ ಹುದ್ದೆಗಳನ್ನು ಪುನರ್ವಸತಿ ಕಾರ್ಯಕರ್ತರಿಗೆ ನೀಡಬೇಕು. ಅಂಗವಿಕಲರ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯಗಳನ್ನು ರಚಿಸಬೇಕು, ಕಾರ್ಯಕರ್ತರು ಸೇವೆಯಲ್ಲಿದ್ದಾಗ ಅಪಘಾತಗಳಿಗೊಳಗಾದರೆ ಅವರ ಕುಟುಂಬದ ನಿರ್ವಹಣೆಗೆ ಪರಿಹಾರ ಧನವನ್ನು ನೀಡಬೇಕು, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಅಂಗವಿಕಲರ ಮಾಸಾಶನ 3 ಸಾವಿರ ರು. ನೀಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆವಣಿ ಎಲ್. ಸತೀಶ್ ಕುಮಾ, ಉಪಾಧ್ಯಕ್ಷ ಮುದುವಾಡಿ ಎಂ. ರಮೇಶ್, ಸದಸ್ಯರಾದ ಎಂ. ವೆಂಕಟರಾಮ್, ಉತ್ತನೂರು ಆರ್. ನಾಗೇಶ್, ಮಾಸ್ತಿ ನಾರಾಯಣಸ್ವಾಮಿ, ಎನ್. ಸತೀಶ್, ಶೈಲಾ, ಶಂಕರಪ್ಪ, ವೆಂಕಟಸ್ವಾಮಿ, ಪರ್ವೀಜ್ ಪಾಷ, ಜಮೀಲ್ ಅಹ್ಮದ್, ಎಂ.ನಾರಾಯಣಸ್ವಾಮಿ, ಸಂತೋಷ್ ಇದ್ದರು.