ಭೂಮಿ ತತ್ವ ಆಧಾರಿತ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ , ಕೋಲಾರ , ಫೆ.6
ಅಂತರ್ಜಲ ಸಮಸ್ಯೆಯಿಂದ ಬಳಲುತ್ತಿರುವ ಕೋಲಾರದಲ್ಲಿ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭೂಮಿ ತತ್ವದ ಆಧಾರದ ಮೇಲೆ ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆದಿದೆ.
ಈ ಬಾರಿಯ ಸಮ್ಮೇಳನದ ವಿಶೇಷವೆಂದರೆ ಫೆ.12 ಮತ್ತು 13 ರಂದು ನಡೆಯುವ ಎರಡು ದಿನಗಳ ಕಾರ್ಯಕ್ರಮಕ್ಕೆ ವಂತಿಗೆಗಾಗಿ ರಾಜಕಾರಣಿಗಳ ಬಳಿ ಕೈಚಾಚಬಾರದೆಂದು ನಿರ್ಧರಿಸಿರುವುದು, ದುಂದು ವೆಚ್ಚಕ್ಕೆ ಕಡಿವಾಣ, ಪ್ಲಾಸ್ಟಿಕ್ ರಹಿತ ಹಾಗೂ ಪ್ರತಿನಿಧಿಗಳಿಗೆ ಸರಳ ಭೋಜನ ಹಾಗೂ ಶುದ್ಧವಾದ ಕುಡಿಯುವ ನೀರು ಒದಗಿಸುವುದಾಗಿದೆ.
ಸಮ್ಮೇಳನದ ಮತ್ತೊಂದು ಗಮನ ಸೆಳೆಯುವ ವಿಷಯವೆಂದರೆ ಭೂಮಿ ತತ್ವದ ಅಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಸಾಹಿತಿ,ಚಾರಣಪ್ರಿಯ, ವಿಮರ್ಷಕರೂ ಆದ ಸಮ್ಮೇಳನಾಧ್ಯಕ್ಷ ಡಾ.ವಿ. ಚಂದ್ರಶೇಖರ ನಂಗಲಿ ಅವರ ಸಲಹೆ ಮೇರೆಗೆ ತೆರೆದ ವಾಹನದ ಮೇಲೆ ಮೆರವಣಿಗೆ ಕೈಬಿಟ್ಟು ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರು, ಪ್ರತಿನಿಧಿಗಳು, ಕಸಾಪ ಪದಾಧಿಕಾರಿಗಳು ಸೇರಿದಂತೆ ಸಮಸ್ತ ಸಾಹಿತ್ಯಪ್ರಿಯರು ಕಾಲ್ನಡಿಯಲ್ಲಿ ಸಮ್ಮೇಳನ ನಡೆಯುವ ನಗರದ ಟಿ. ಚನ್ನಯ್ಯರಂಗಮಂದಿರಕ್ಕೆ ಸೇರುವುದಾಗಿದೆ.
12 ಅಡಿ ಎತ್ತರದ ಭೌಗೋಳಿಕ ಸ್ತಬ್ಧಚಿತ್ರ: ಈ ಬಾರಿಯ ಸಮ್ಮೇಳನದಲ್ಲಿ ಪರಿಸರ, ವಿಜ್ಞಾನ, ಖಗೋಳದ ವಿಸ್ಮಯ ಹಾಗೂ ಬರಡಾಗುತ್ತಿರುವ ಕೋಲಾರದ ಪ್ರಮುಖ ಸಂಗತಿಗಳನ್ನು ಪ್ರತಿಬಿಂಬಿಸುವ ಭೂಮಿತತ್ವದ ಸುಮಾರು 12 ಅಡಿ ಎತ್ತರದ ಭೌಗೋಳಿಕ ಸ್ತಬ್ಧಚಿತ್ರವನ್ನು ಮೆರವಣಿಗೆಯಲ್ಲಿ ಕಾಣಬಹುದಾಗಿದೆ. ಇದನ್ನು ಕಲಾವಿದ, ಶಿಕ್ಷಕ ಕಾಳಿದಾಸ ಅವರು ವಿನ್ಯಾಸಗೊಳಿಸಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಅವರು ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಬೇಕೆಂಬ ಆಶಯ ಹೊಂದಿರುವುದರಿಂದ ಎರಡು ದಿನಗಳ ಕಾರ್ಯಕ್ರಮ ಬಯಲು ಪ್ರದೇಶದಲ್ಲಿ ನಡೆಸುವ ಬದಲು ಚಿ. ಚನ್ನಯ್ಯ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ಈ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ವಿವಿಧ ವಿಚಾರಗೋಷ್ಠಿಗಳ ಮೂಲಕ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಹಾಗೂ ಕಾರ್ಯಕ್ರಮದಲ್ಲಿ ಎರಡು ದಿನ ಸಕ್ರಿಯವಾಗಿ ತೋಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ. ವಿಜ್ಞಾನ ಲೇಖಕ, ಗಾಯಕ ಎಚ್.ಎ. ಪುರುಷೋತ್ತಮ ರಾವ್ ಪರಿಸರ ಪ್ರೇಮಿಯಾಗಿರುವುದರಿಂದ ಸಮ್ಮೇಳನದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಇರಬಾರದೆಂದು ಹಾಗೊಂದು ವೇಳೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿರುವುದರಿಂದ ಪ್ಲಾಸ್ಟಿಕ್ ಎಲ್ಲೂ ಸುಳಿಯದಂತೆ ಎಚ್ಚರವಹಿಸಲಾಗಿದೆ.
ಹಸಿರು ಉಳಿಸಲು ಜಾಗೃತಿ: ಸಾಹಿತ್ಯದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವುದರ ಜತೆಗೆ ಹಸಿರು ಉಳಿಸಿಸಲು ಜನತೆಯಲ್ಲಿ ಜಾಗೃತಿ ಮೂಡಿಸುವುದು ಸಮ್ಮೇಳನದ ಆಶಯಗಳಲ್ಲಿ ಒಂದಾಗಿದೆ ಎಂದು ಸಿದ್ಧತೆಗಳ ವಿವರ ನೀಡಲು ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ ತಿಳಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಸಮ್ಮೇಳನಾಧ್ಯಕ್ಷರು ಕಾಲ್ನಡಿಗೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭೂಮಿತಾಯಿ ಪ್ರತಿಕೃತಿಯನ್ನು ಸಾಹಿತ್ಯ ದಿಬ್ಬಣದಲ್ಲಿ ವೈಭವೀಕರಿಸಲಾಗುತ್ತಿದೆ, 12 ಜಾನಪದ ಕಲಾವಿದರ ತಂಡ ಭಾಗವಹಿಸಲಿದೆ, ವಿಜ್ಞಾನ ಮತ್ತು ಪ್ರಸ್ತುತತೆ ಕುರಿತ ವಿಚಾರಗೋಷ್ಠಿಗೆ 600 ಮಂದಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ, ಎರಡು ದಿನಗಳ ಕಾರ್ಯಕ್ರಮದ ಯಶಸ್ವಿಗಾಗಿ ಉಪ ಸಮಿತಿಗಳ ಜೊತೆಗೆ 200 ಮಂದಿ ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸಮ್ಮೇಳನದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ಬಂಗಾರಪೇಟೆ ವೃತ್ತ, ಕ್ಲಾಕ್ ಟವರ್ ವೃತ್ತ, ಕೋರ್ಟ್ ಸರ್ಕಲ್, ಬಾಲಕರ ಸರ್ಕಾರಿ ಕಾಲೇಜು ಹಾಗೂ ಕೆಎಸ್ಆರ್ಟಿಸಿ ಡಿಪೋ ಬಳಿ ಮಾಸ್ತಿ, ಡಿವಿಜಿ, ಅನಕೃ, ಸೋಮಶೇಖರಗೌಡ ಹಾಗೂ ಉತ್ತನೂರು ರಾಜಮ್ಮ ಹೆಸರಿನಲ್ಲಿ 5 ಮಹಾದ್ವಾರಗಳನ್ನು ನಿರ್ಮಿಸಲಾಗುತ್ತಿದೆ.
ಯಾವುದೇ ಕಾರಣಕ್ಕೂ ಶಾಲಾ-ಕಾಲೇಜುಗಳ ಮಕ್ಕಳನ್ನು ಮೆರವಣಿಗೆಗೆ ಬಳಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಸಮ್ಮೇಳನಕ್ಕೆ ಸುಮಾರು 10 ಲಕ್ಷ ರು. ಬೇಕಾಗುತ್ತದೆ, ಕೇಂದ್ರ ಕಸಾಪದಿಂದ 4.50 ಲಕ್ಷ ರು. ಅನುದಾನ ಸಿಗಲಿದೆ, ಉಳಿದ ಹಣವನ್ನು ಜಾಹಿರಾತುಗಳ ಮೂಲಕ ಹಾಗೂ ನಗರಸಭೆ ಇನ್ನಿತರ ಮೂಲಗಳಿಂದ ಸಂಗ್ರಹಣೆ ಮಾಡಲು ಉದ್ದೇಶಿಸಿದ್ದು, ಯಾರನ್ನು ಕಾಡಿಸಿ-ಪೀಡಿಸಿ ಹಣ ಸಂಗ್ರಹಣೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಎಂ.ವಿ. ಜನಾರ್ಧನ್, ಜಿಲ್ಲಾ ಪ್ರಧಾನ ಸಂಚಾಲಕ ತೇ.ಸಿ. ಬದರಿನಾಥ್, ಕೆಜಿಎಫ್ ವಿಶೇಷ ಘಟಕದ ಅಧ್ಯಕ್ಷ ವೀರ ವೆಂಕಟಪ್ಪ, ಕೋಲಾರ ತಾಲೂಕು ಅಧ್ಯಕ್ಷ ನಾರಾಯಣಪ್ಪ, ಬಂಗಾರಪೇಟೆ ಆರ್. ಅಶ್ವತ್ಥ್, ಉಪನ್ಯಾಸಕ ನಾಗಾನಂದ ಕೆಂಪರಾಜ್, ರತ್ನಪ್ಪ ಮೇಲಾಗಾಣಿ ಇದ್ದರು.
-ಪಾ.ಶ್ರೀ. ಅನಂತರಾಮ್