ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ರೈಲು ತಡೆ
ಚಿಕ್ಕಬಳ್ಳಾಪುರ: ನಗರದ ರೇಲ್ವೆ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಚಿಕ್ಕಬಳ್ಳಾಪುರ-ಕೋಲಾರ ಪ್ಯಾಸೆಂಜರ್ ರೈಲನ್ನು ಕೆಲ ಕಾಲ ತಡೆದು ಕೇಂದ್ರ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿಸಿದರು.
ನಗರದ ರೇಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದ ರೈಲ್ವೇ ನಿಲ್ದಾಣದಲ್ಲಿ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇನ್ನಿತರ ಕೃಷಿಸಲಕರಣೆಗಳ ಬೆಲೆಯನ್ನು 3 ಪಟ್ಟು ಹೆಚ್ಚಿಸುವ ಮೂಲಕ ರೈತರ ಹೊಟ್ಟೆಗೆ ಕನ್ನ ಹಾಕುತ್ತಿದೆ.ಬೆಲೆ ಏರಿಕೆಯಿಂದ ಅನ್ನದಾತ ಕಂಗಲಾಗಿದ್ದಾನೆ. ಬೆಲೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.ಕೇಂದ್ರ ಯುಪಿಎ ಸರ್ಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರಧಾನಿ ಮನಮೋಹನ್ಸಿಂಗ್ ಈ ಬಗ್ಗೆ ಮೌನ ತಾಳಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಸಚಿವ ವೀರಪ್ಪ ಮೊಯ್ಲಿ ಕಾಳಜಿ ಇಲ್ಲ, ಕೇವಲ ಸುಳ್ಳು ಭರವಸೆ ನೀಡುತ್ತ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ಗೌಡ, ಎ.ವಿ.ಬೈರೇಗೌಡ, ಸಿ.ವಿ.ಲೋಕೇಶ್ಗೌಡ, ಚೆನ್ನಕೇಶವರೆಡ್ಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.