ನೀರು ಕೊಡಿ ಇಲ್ಲವೇ ಪ್ರತ್ಯೇಕ ರಾಜ್ಯ ಮಾಡಿ
ಕ.ಪ್ರ. ವಾರ್ತೆ , ಕೋಲಾರ , ಫೆ 7
ನಮ್ಮ ತೆರಿಗೆ ಹಣದಿಂದ ಬೇರೆಯವರು ಪ್ರಯೋಜನ ಪಡೆಯುತ್ತಿದ್ದಾರೆ, ನಾವಿಲ್ಲಿ ಶುದ್ಧವಾದ ಕುಡಿಯುವ ನೀರಿಲ್ಲದೆ, ಅಗತ್ಯ ಮೂಲ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿದ್ದೇವೆ. ಬರ ಪೀಡಿತ ಕೋಲಾರ ಜಿಲ್ಲೆ ಸೇರಿದಂತೆ ಬಯಲು ಸೀಮೆಗೆ ಸೇರಿದ 9 ಜಿಲ್ಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿ, ಇಲ್ಲವೇ ಪ್ರತ್ಯೇಕ ರಾಜ್ಯ ಮಾಡಿ.
ಈ ರೀತಿಯ ಬೇಡಿಕೆ ಮಂಡಿಸಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಿದವರು ಕೋಲಾರ ವಕೀಲರು. ಶುಕ್ರವಾರ ಬೆಳಿಗ್ಗೆ ವಕೀಲರ ಸಂಘದ ಕರೆಯ ಮೇರೆಗೆ ಎಲ್ಲಾ ವಕೀಲರು ಸಂಘದ ಸಭಾಂಗಣದಲ್ಲಿ ಸೇರಿ ನ್ಯಾಯಾಲಯ ಕಲಾಪಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಲು ನಿರ್ಧರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ವಿ.ಆನಂದ್, ಉಪಾಧ್ಯಕ್ಷ ನಂಜುಂಡಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಸತೀಶ್ ಅವರ ನೇತೃತ್ವದಲ್ಲಿ ನೂರಾರು ವಕೀಲರು ಸಂಘದ ಕಚೇರಿಯಿಂದ ಬೈಕ್ ರ್ಯಾಲಿ ಹಮ್ಮಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಭಿತ್ತಿಪತ್ರದೊಂದಿಗೆ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಅಪರ ಜಿಲ್ಲಾಧಿಕಾರಿ ನವೀನ್‌ಕುಮಾರ್‌ರಾಜ್ ಅವರಿಗೆ ಮನವಿ ಸಲ್ಲಿಸಿ ಇದುವರೆಗಿನ ಎಲ್ಲಾ ಸರ್ಕಾರಗಳು ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಅನ್ಯಾಯ ಮಾಡಿವೆ. ಬಯಲು ಸೀಮೆಯ ಜಿಲ್ಲೆಗಳು ಉಳಿಯಬೇಕಾದರೆ ಶಾಶ್ವತ ಪರಿಹಾರ ಅಗತ್ಯವಿದ್ದು, ಇದನ್ನು ಈಡೇರಿಸಲು ಆಗದಿದ್ದರೆ 9 ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಅವಕಾಶ ನೀಡಿದಲ್ಲಿ ಇಲ್ಲಿ ಸಂಗ್ರಹಣೆ ಆಗುವ ತೆರಿಗೆ ಹಣದಲ್ಲಿ ನೀರಿನ ಸೌಕರ್ಯ ಮಾಡಿಕೊಳ್ಳವುದಾಗಿ ಒತ್ತಾಯಿಸಿದರು.
ನೀರಿಗಾಗಿ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಯಬೇಕಾಗಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಜನತೆಯ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ತೀವ್ರತೆ ಹೆಚ್ಚಾಗಬಹುದೆಂದು ಮನವಿ ಪತ್ರ ಸಲ್ಲಿಸಿದ ವಕೀಲರ ಸಂಘದ ಅಧ್ಯಕ್ಷ ಎ.ವಿ. ಆನಂದ್ ಎಚ್ಚರಿಕೆ ನೀಡಿದರು. ಹಿರಿಯ ವಕೀಲರಾದ ಅರುಣ್‌ಕುಮಾರ್, ಬಿಸಪ್ಪಗೌಡ, ಸುಬ್ಬಾರೆಡ್ಡಿ, ಕೆ.ವಿ.ಶಂಕರಪ್ಪ, ಧನರಾಜ್, ಕೆ.ವಿ.ಶಂಕರಪ್ಪ,ಅಮರನಾಥ್ ಭಾಗಹಿಸಿದ್ದರು.