ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೈಕ್ಷಣಿಕ ಸವಲತ್ತು ಸದುಪಯೋಗವಾಗಲಿ

Vishwanath S
Updated On : 8 Feb 2014, 12:36 pm

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಕ್ಕಳಿಗೆ ಗುಣಮಟ್ಟ ಶಿಕ್ಷಣವನ್ನು ಒದಗಿಸುವ ಸಲುವಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿರುವುದನ್ನು ಪೋಷಕರು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದರು.  
ತಾಲೂಕಿನ ನಂದಿ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವು ಒಳ್ಳೆಯ ಜೀವನ ರೂಪಿಸಿಕೊಳ್ಳುವಲ್ಲಿ ಪ್ರಮುಖವಾಗಿ ಪರಿಣಾಮವನ್ನು ಬೀರುತ್ತದೆ.ಇದರಿಂದ ಪ್ರತಿಯೊಬ್ಬ ಮಗು ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ತಮ್ಮ ಸಾಮರ್ಥ್ಯದಿಂದ ಸ್ವಾವಲಂಬಿ ಜೀವನದ ನಡೆಸುವುದರ ಜೊತೆಗೆ ಉತ್ತಮ ಪ್ರಜೆಗಳಾಗಿ ಜವಾಬ್ದಾರಿಯನ್ನು ನಿರ್ವಹಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದರು. ಶಾಸಕ ಸುಧಾಕರ್ ಮಾತನಾಡಿ, ಗ್ರಾಮೀಣ ಪ್ರದೇಶದ ಶಾಲೆಯೊಂದು 120 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವುದು ಒಂದು ಸಾಧನೆ ಎಂದು ನಂದಿ ಸರ್ಕಾರಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುಕೂಲ ಕಲ್ಪಿಸುತ್ತಿದೆ. ಬಿಸಿಯೂಟ, ಹಾಜರಾತಿಗೆ ಪ್ರೋತ್ಸಾಹಧನ, ಕ್ಷೀರಭಾಗ್ಯ ಸೇರದಂತೆ ಅನೇಕ ಉತ್ತೇಜಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.ಇದರ ಫಲವಾಗಿ ಶಾಲೆಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೋಟ್ಯಂತರ  ಅನುದಾನ ಖರ್ಚು ಮಾಡುತ್ತಿವೆ.  ಅದರ ಸದ್ಭಳಕೆಯನ್ನು ಮಾಡಿಕೊಳ್ಳುವ ಕಾರ್ಯ ಪ್ರಮುಖವಾಗಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳೀಯವಾಗಿ ಇದನ್ನು ಪರಿಚಯಿಸುವ, ಪ್ರಚಾರ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಇರುವ ಶೈಕ್ಷಣಿಕ ತೊಡಕುಗಳ ನಿವಾರಣೆಗೆ ಸರ್ಕಾರ ಪ್ರಯತ್ನಿಸುತ್ತಿದ್ದು ಮಕ್ಕಳ ಪ್ರಗತಿಗೆ ಶಿಕ್ಷಕರು ಮಾತ್ರ ಅಲ್ಲ, ಪಾಲಕರೂ ಕೈಜೋಡಿಸಬೇಕು. ಪೋಷಕರ ಪ್ರೋತ್ಸಾಹ ಸಿಕ್ಕರೆ ಅನೇಕ ಮಕ್ಕಳು ಉಜ್ವಲ ಭವಿಷ್ಯ ಕಂಡುಕೊಳ್ಳುತ್ತಾರೆ.ಇಂತಹ ಕಾರ್ಯಕ್ರಮಗಳು ಅಭಿವೃದ್ಧಿಯನ್ನಷ್ಟೇ ಉದ್ದೇಶವಾಗಿಟ್ಟುಕೊಳ್ಳಬೇಕು.ಇವು ರಾಜಕೀಯೇತರ ಕಾರ್ಯಕ್ರಮಗಳಾಗಿ ನಡೆಯಬೇಕೆಂದು ಅಭಿಪ್ರಾಯವ್ಯಕ್ತಪಡಿಸಿದರು.ಸಮಾಜದ ಪ್ರಮುಖ ಮುಖಂಡರು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಿಕೊಡಬೇಕು. ಸರ್. ಎಂ. ವಿಶ್ವೇಶ್ವರಯ್ಯನವರು ಈ ಶಾಲೆಯಲ್ಲಿ ಓದಿಲ್ಲದಿರಬಹುದು.ಆದರೆ,ಅವರು ಹುಟ್ಟಿದ ಪ್ರದೇಶದಲ್ಲಿ ಶಾಲೆ ಇದೆ.ಅನೇಕ ಮೇಧಾವಿಗಳನ್ನು ಸಮಾಜಕ್ಕೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಧಾನಸಭೆ ಉಪಾಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ, ಜಿಪಂಸದಸ್ಯೆ ಮಂಜುಳಾ ವೆಂಕಟೇಶ್, ಗ್ರಾಪಂ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷಮಲ್ಲಪ್ಪ, ಡಿಡಿಪಿಇ ಅಜಿತ್ ಪ್ರಸಾದ್, ಬಿಇಒ ಶ್ರೀಕಂಠ, ನಂದಿ ಮುನಿಸ್ವಾಮಿ, ಸು.ಧಾ.ವೆಂಕಟೇಶ್, ಜಿ.ಆರ್.ಶ್ರೀನಿವಾಸ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement