ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರದ್ಧೆಯಿಂದ ವ್ಯಾಸಂಗ ಮಾಡಲು ಸೂಚನೆ

Vishwanath S
Updated On : 9 Feb 2014, 12:52 pm

ಶಿಡ್ಲಘಟ್ಟ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಪೋಷಕರು ಹಾಗೂ ತಾಲೂಕಿಗೆ ಕೀರ್ತಿ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಕರೆ ನೀಡಿದರು. ತಾಲೂಕಿನ ಬೂದಾಳ ಗೇಟ್ ಬಳಿಯಿರುವ ಗರುಡಾದ್ರಿ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿಡ್ಲಘಟ್ಟ ತಾಲೂಕಿಗೆ ದ್ವಿತೀಯ ಸ್ಥಾನ ಲಭಿಸಿದ್ದು ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಲು ಸರಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ವಿಶೇಷ ಆಸಕ್ತಿವಹಿಬೇಕೆಂದರು. ಶಾಲೆಯಿಂದ ಹೊರಗುಳಿದ ಎಲ್ಲಾ ಮಕ್ಕಳನ್ನು ಶಾಲೆಯತ್ತ ಕರೆತರಲು ಸಂಘ ಸಂಸ್ಥೆಗಳು ಸಮಾಜ ಸೇವಕರು ಕೈಜೋಡಿಸಬೇಕೆಂದು ಮನವಿ ಮಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೃತ ಅರಣ್ಯ ರಕ್ಷಕನಿಗೆ ಸಂತಾಪ
ಚಿಂತಾಮಣಿ: ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಅರಣ್ಯ ರಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಎಸ್.ಟಿ. ನರಸಿಂಹಪ್ಪ ಸೇವೆ ಸ್ಮರಿಸಿ ಮೌನ ಆಚರಿಸಲಾಯಿತು. ನಗರದ ಸೊಣ್ಣಶೆಟ್ಟಿಹಳ್ಳಿಯ ಅರಣ್ಯ ವಸತಿ ಗೃಹದಲ್ಲಿದ್ದ ಎಸ್.ಟಿ. ನರಸಿಂಹಪ್ಪ ಜ.31 ರಂದು ಚಿಂತಾಮಣಿ-ಬಾಗೇಪಲ್ಲಿ ರಸ್ತೆಯ ಕೇತನಾಯಕನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವುದರಿಂದ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಅಧಿಕಾರಿ ಹಾಗೂ ಅರಣ್ಯ ಸಿಬ್ಬಂದಿ ಸಂತಾಪ ಸೂಚಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಉಪವಲಯದ ಅರಣ್ಯಾಧಿಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಜಯಚಂದ್ರ, ಉಪಾಧ್ಯಕ್ಷ ಗೌರಬಿದನೂರು ಪ್ರಾದೇಶಿಕ ಅರಣ್ಯ ವಲಯ ರಹಮತ್ ಉಲ್ಲಾ, ಪ್ರಾದೇಶಿಕ ಅರಣ್ಯವಲಯ ಗುಡಿಬಂಡೆ ಕಾರ್ಯದರ್ಶಿ ಎಸ್. ಮಂಜುನಾಥ್, ವೈ.ಎಂ. ಬಾಲಶಂಕರ್, ಸೈಯ್ಯದ್ ರಹಮತ್ ಅಲಿ ಶಂಷಿ ಸಂತಾಪ ಸೂಚಿಸಿದ್ದಾರೆ.

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿಡ್ಲಘಟ್ಟ: ಮೂಲ ಸೌಕರ್ಯ ಒದಗಿಸಿಲ್ಲವೆಂದು ಸಿದಾರ್ಥ ನಗರದ ಬಡಾವಣೆ ಜನರು ಪುರಸಭೆ ಮುಂದೆ ಧರಣಿ ನಡೆಸಿದ ಘಟನೆ ನಡೆದಿದೆ. ಪಟ್ಟಣದ 8ನೇ ವಾರ್ಡ್ ವಾಸಿಗಳು ಕಳೆದ 5 ವರ್ಷಗಳಿಂದ ಪುರಸಭೆ ಕುಡಿಯುವ ನೀರು, ಚರಂಡಿ, ರಸ್ತೆ ಮೊದಲಾದ ಸೌಕರ್ಯಗಳನ್ನು ನೀಡಿಲ್ಲವೆಂದು ಆಗ್ರಹಿಸಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ವಾಸವಾಗಿರುವ ಸಿದಾರ್ಥನಗರದಲ್ಲಿ ಸರ್ಕಾರದಿಂದ ಅನೇಕ ಯೋಜನೆಗಳು ಬಂದಿದ್ದರೂ ಪುರಸಬೆಯ ಅಧಿಕಾರಿಗಳು ಬೇಜವಬ್ದಾರಿಯಿಂದ, ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿಲ್ಲವೆಂದು ಆರೋಪಿಸಿದರು. ಬೇಡಿಕೆ ಈಡೇರದೆ ಧರಣಿ ಹಿಂತೆಗೆದುಕೊಳ್ಳುವುದಿಲ್ಲವೆಂದು ಕುಳಿತ್ತಿದ ನಿವಾಸಿಗಳನ್ನು ಪುರ ಠಾಣೆ ಪಿಎಸ್‌ಐ ಪುರುಷೂತ್ತಮ್, ಹನುಮಂತಪ್ಪ ಸಮಾದಾನ ಪಡಿಸಿದರು. ಪುರಸಭಾ ಮುಖ್ಯಸ್ಥ ಚೆನ್ನರಾಯಪ್ಪನವರಿಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಕೆಜಿಎಫ್: ವಿದ್ಯಾರ್ಥಿಗಳು ಸರ್ಕಾರದ ಸೌಲತ್ತುಗಳನ್ನು ಉಪಯೋಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕಿ ವೈ. ರಾಮಕ್ಕ ಹೇಳಿದರು. ನಗರದ ಉರಿಗಾಂಪೇಟೆ, ಗೋಮಾಕನಹಳ್ಳಿ ಹಾಗೂ ಬಾಲಕರ ಬಾಲಕೀಯರ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳ ವಿತರಣಾ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿ, ಹಳ್ಳಿಗಳಿಂದ ಬರುವ ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಪರದಾಡುವ ಪರಿಸ್ಥಿತಿಯಲ್ಲಿ ಸರ್ಕಾರದಿಂದ ನೀಡುತ್ತಿರುವ ಸೈಕಲ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದೇ ರೀತಿ ಪೋಷಕರು ಮಕ್ಕಳಿಗೆ ನೀಡಿರುವ ಸೈಕಲ್‌ಗಳನ್ನು ಇತರೆ ಕೆಲಸ ಕಾರ್ಯಗಳಿಗೆ ದುರುಪಯೋಗ ಮಾಡಿಕೊಳ್ಳದೆ ಅವರ ಶಿಕ್ಷಣಕ್ಕೆ ಸಹಕಾರಿಯಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಟಿ. ಕೃಷ್ಣಮೂರ್ತಿ ಮಕ್ಕಳ ಪೋಷಕರು ಇದ್ದರು.

23 ರಂದು ಶಕ್ತಿ ಪ್ರದರ್ಶನ
ಚಿಂತಾಮಣಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಶಿಪಾರಸ್ಸು ಮಾಡಲು ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯಿಂದ ಶಕ್ತಿ ಪ್ರದರ್ಶನ ಮಾಡಲು ತೀರ್ಮಾನಿಸಿರುವುದಾಗಿ ಜಿಲ್ಲಾಧ್ಯಕ್ಷ ಎಂ. ಕೃಷ್ಣಪ್ಪ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ  ಆದಿ ಜಾಂಬಜಯಂತಿ ಹಾಗೂ ಎ.ಜೆ. ಸದಾಶಿವ  ಆಯೋಗದ ವರದಿ ಶಿಪಾರಸ್ಸು ಮಾಡಲು ಆಗ್ರಹಿಸಿ 23 ರಂದು ಶಕ್ತಿ ಪ್ರದರ್ಶನ ಹಮ್ಮಿಕೊಳ್ಳಲು ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ ಸಂಘಟನೆ ಬಲಪಡಿಸಲು ಸಮುದಾಯದ ಎಲ್ಲಾ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದರು. ತಾಲೂಕು ಅಧ್ಯಕ್ಷ ರಂಗಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಆರ್.ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎನ್.ನರಸಿಂಹಮೂರ್ತಿ, ಗೌರವಾಧ್ಯಕ್ಷ ತಿಮ್ಮಸಂದ್ರ ಸೋಮಶೇಖರ್, ವೆಂಕಟಗಿರಿಕೋಟೆ ಸುರೇಶ್, ಚಿನ್ನಸಂದ್ರ ನಾರಾಯಣಸ್ವಾಮಿ ಇದ್ದರು.

ಪ್ರೇರಕರಲ್ಲಿ ಇಚ್ಚಾಶಕ್ತಿ ಇರಬೇಕು
ಮಾಲೂರು: ವಯಸ್ಕರ ಶಿಕ್ಷಣ ಯಶಸ್ವಿಯಾಗಬೇಕಾದರೆ ಪ್ರೇರಕರಲ್ಲಿ ಇಚ್ಚಾಶಕ್ತಿ ಇರಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುರೇಶ್ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಲೋಕ ಶಿಕ್ಷಣ ಸಮಿತಿ ಆಯೋಜಿಸಿದ್ದ ತಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೇರಕರ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದ ಅನಕ್ಷರತೆ ಹೋಗಲಾಡಿಸಲು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಸಾಕ್ಷರತಾ ಕಾರ್ಯಕ್ರಮದಿಂದ ಸಾಕ್ಷರತಾ ಪ್ರಮಾಣ ಗಣನೀಯವಾಗಿ ಹೆಚ್ಚಿದೆ ಎಂದರು. ಜಿಲ್ಲಾ ಸಾಕ್ಷರತಾ ಕಾರ್ಯಕ್ರಮದ ಸಹಾಯಕ ಸಂಯೋಜಕ ಡಿ.ಆರ್. ರಾಜಪ್ಪ ಮಾತನಾಡಿ, ಗ್ರಾಪಂ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಪ್ರೇರಕರು ಕಡ್ಡಾಯವಾಗಿ ಭಾಗವಹಿಸಿ ಸೂಕ್ತ ಮಾಹಿತಿ ನೀಡಬೇಕು. ಪ್ರೇರಕರು ಯಾವ ರೀತಿ ಕೆಲಸ ಮಾಡಬೇಕು, ಕಡತಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ರಾಜಣ್ಣ, ತಾಪಂ ಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ತಾ.ಸಂಯೋಜಕ ವಿ. ಬಾಲಕೃಷ್ಣ ಇದ್ದರು.

 ಬಲಿಷ್ಠವಾಗಿರುವ ಭಾರತ ನ್ಯಾಯಾಂಗ ವ್ಯವಸ್ಥೆ
ಮುಳಬಾಗಲು: ಭಾರತ ಬಲಿಷ್ಠವಾದ ಸಂವಿಧಾನದೊಂದಿಗೆ ಉತ್ತಮ ನ್ಯಾಯವ್ಯವಸ್ಥೆ ಹೊಂದಿದೆ ಎಂದು ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು. ಪಟ್ಚಣದ ಹೊರವಲಯದ ಭೂಸಾಲಕುಂಟೆ ಯಲ್ಲಿ ಶನಿವಾರ ನೂತನ ನ್ಯಾಯಾಲಯದ ಸಂಕಿರಣ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನ್ಯಾಯಾಂಗ ಹಲವಾರು ಮುಖ್ಯವಾದ ತೀರ್ಪುಗಳ ಮೂಲಕ ವಿಶ್ವದ ನ್ಯಾಯವ್ಯವಸ್ಥೆಯ ಗಮನ ಸೆಳೆದಿದೆ ಎಂದರು. ನ್ಯಾ.ಎ.ಎನ್. ವೇಣುಗೋಪಾಲಗೌಡ ಮಾತನಾಡಿ, ದೇಶದಲ್ಲಿ ಕಾನೂನಿಗೆ ಕೊರತೆ ಇಲ್ಲ. ಆದರೆ ಅದನ್ನು ಪಾಲಿಸುವಲ್ಲಿ ಕೊರತೆ ಇದೆ. ಕಾನೂನುಗಳ ಸಮಾಜ ಮುಖಿಯಾಗಿಸಲು ವಕೀಲರು, ನ್ಯಾಯಾಲಯಗಳು ಶ್ರಮಿಸಬೇಕು ಎಂದರು. ನ್ಯಾ.ಜವಾದ್ ರಹೀಂ ಮಾತನಾಡಿಂದರು. ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್. ರೇಣುಕಾಪ್ರಸಾದ್, ಕೋಲಾರ ಜಿಲ್ಲಾಧಿಕಾರಿ ಡಿ.ಕೆ. ರವಿ. ವಕೀಲರ ಸಂಘದ ಅಧ್ಯಕ್ಷ ಎನ್. ಪ್ರಭಾಕರ್, ನ್ಯಾ.ಓಂಕಾರಮೂರ್ತಿ ಇದ್ದರು.

ರಾಯರ ಮಠದಲ್ಲಿ ವಿಜೃಂಭಣೆಯ ಶ್ರೀ ಮಧ್ವ ನವವಿ
ಮಾಲೂರು: ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಶ್ರೀ ರಾಯರ ಮಠದಲ್ಲಿ ಶ್ರೀ ಮಧ್ವ ನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರಧಾನ ಆರ್ಚಕ ಅಂಜನ್ ಕುಮಾರ್ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಪವಮಾನ ಹೋಮ,ಪಂಚಾಮೃತ ಅಭಿಷೇಕ, ಭಜನೆ ಹಾಗೂ ಪ್ರಾಕರೋತ್ಸವ ನಡೆಯಿತು. ಮಧ್ಯಾಹ್ನ ಒಂದು ಗಂಟೆಗೆ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ, ಮಹಿಳಾ ಭಕ್ತಿ ಮಂಡಳಿಯವರು ಭಜನೆಯ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗರಾಜ್‌ರಾವ್, ಜಯರಾವ್, ಶೇಖರ್, ಚಂದ್ರಶೇಖರ್, ಭದ್ರಿನಾಥ್, ರಾಘವೇಂದ್ರ ವೈದ್ಯ, ಕಮಲೇಶ್, ವಕೀಲ ಮಂಜುನಾಥ್, ಶ್ರೀಧರ್ ಮೂರ್ತಿ, ಎಚ್.ಎನ್. ರವಿ, ಭಾಗ್ಯಮ್ಮ, ಸೀತಾರಾಮ ಮೂರ್ತಿ, ಗಾಯಿತ್ರಿ, ಇಂದಿರಮ್ಮ,  ನಾಗರಾಜ್ ರಾವ್, ಭದ್ರೀ, ಹೆ.ಲಿಂ. ಮಹೇಶ್, ಮಂಜುನಾಥ್ ಇದ್ದರು.

ಹಾಲಿನ ಬಿಲ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ವೈಜಕೂರು ಹಾಲು ಉತ್ಪಾದಕರ ಹಾಲಿನ ಬಿಲ್ಲನ್ನು ನೀಡದೆ ತೊಂದರೆ ನೀಡುತ್ತಿರುವ ಕಾರ್ಯದರ್ಶಿ ಕಾರ್ಯವೈಖರಿ ವಿರುದ್ಧ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ನಡೆಯಿತು. ತಾಲೂಕಿನ ವೈಜಕೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 15 ದಿನಕ್ಕೆ ಒಮ್ಮೆ ನೀಡುವ ಹಾಲಿನ ಬಿಲ್ಲನ್ನು ಕಾರ್ಯದರ್ಶಿ ನಿಗದಿತ ಸಮಯಕ್ಕೆ ನೀಡದೆ ಹಾಲು ಉತ್ಪಾದಕರನ್ನು ತಿಂಗಳಾನುಗಟ್ಟಲೆ ಪರದಾಡಿಸುತ್ತಿದ್ದಾರೆಂದು ಆರೋಪಿಸಿದರು. ಕಾರ್ಯದರ್ಶಿಯನ್ನು ವಯೋವುತಿ ಆಧಾರದ ಮೇಲೆ ನಿವೃತ್ತಿಗೊಳಿಸಿದ್ದರೂ, ರಾಜಕೀಯ ಒತ್ತಡದಿಂದ ಅವರನ್ನು ಮತ್ತೆ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಿರುವುದರಿಂದ ಹಾಲು ಉತ್ಪಾದಕರಿಗೆ ತೊಂದರೆಯಾಗುತ್ತಿದೆಯೆಂದು ಗ್ರಾಪಂ ಸದಸ್ಯ ಕೃಷ್ಣಪ್ಪ ಆರೋಪಿಸಿದ್ದಾರೆ.

ಕಟ್ಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ರಥೋತ್ಸವ
ಮುಳಬಾಗಲು: ಪಟ್ಟಣದ ಅಗ್ರಹಾರದ ಕಟ್ಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಧ್ವನವಮಿ ಪ್ರಯುಕ್ತ ಶನಿವಾರ ರಾಮದೇವರ ಬ್ರಹ್ಮರಥೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು. ಶ್ರೀಪಾದರಾಜರ ಮಠದ ಜಯರಾಜ್, ಎಚ್.ಎಸ್. ವೆಂಕಟೇಶ್, ದೀಪುಕೃಷ್ಣ, ಮುಖ್ಯ ಅರ್ಚಕ ಶೇಷಗಿರಿ, ನಾಗರಾಜ್, ಧನಂಜಯ ಮುಂತಾದವರು ಭಾಗವಹಿಸಿದ್ದರು. ರಂಗ ವಿಠಲ ಭಕ್ತಿ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಿತು. ಮಧ್ವ ನವಮಿ ಪ್ರಯುಕ್ತವಾಗಿ ವಿಶೇಷ ಪೂಜೆಗಳು ನಡೆಯಿತು.

'ಕಂದಾಯ ಅದಾಲತ್ ಸದುಪಯೋಗ ಪಡಿಸಿಕೊಳ್ಳಿ'
ಮಾಲೂರು: ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಕಂದಾಯ ಅದಾಲತ್‌ನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಡಾ.ಸುಧಾ ಪಾಯ್ಸ್ ಹೇಳಿದರು. ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿ, ರೈತರ ಜಮೀನಿಗೆ ಸಂಬಂಧಿಸಿದ ಖಾತೆ ತಿದ್ದುಪಡಿ, ಪವತಿ ಖಾತೆ, ಪಹಣಿ ತಿದ್ದುಪಡಿ, ಆಕಾರ ಬಂದ್, ಖರಾಬು ಜಮೀನುಗಳ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಆರ್‌ಟಿಸಿಗಳಲ್ಲಿ  ಆಗಿರುವ ಸಣ್ಣಪುಟ್ಟ ತಪ್ಪುಗಳ ತಿದ್ದುಪಡಿ, 3 ಮತ್ತು 4 ನೇ ಕಾಲಂ ವಿಸ್ತೀರ್ಣ ತಾಳೆ ಮಾಡುವುದು. ಕ್ರಯ ಪತ್ರ ಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಹೋಬಳಿಯ ಡಿ.ಎನ್. ದೊಡ್ಡಿ, ಬಾಳಿಗಾನಹಳ್ಳಿ, ಚಿಕ್ಕತಿರುಪತಿ, ಜಯಮಂಗಲ, ಲಕ್ಕೂರು, ಎಚ್. ಹೊಸಕೋಟೆ, ನೂಸಗೆರೆ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳ 2,300 ಅರ್ಜಿಗಳನ್ನು ಇದೇ ಕಂದಾಯ ಅದಾಲತ್‌ನಲ್ಲಿ ಬಗೆ ಹರಿಸಲಾಯಿತು. ಉಪ ತಹಸೀಲ್ದಾರ್ ತಿಮ್ಮರಾಯಪ್ಪ ಸೇರಿದಂತೆ ಕಂದಾಯ ಅಧಿಕಾರಿಗಳು,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು.

ಶಾಶ್ವತ ನೀರಾವರಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ
ಮಾಲೂರು: ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಅಗ್ರಹಿಸಿ ತಾಲೂಕು ವಕೀಲರ ಸಂಘ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಅರ್ಪಿಸಿತು. ನ್ಯಾಯಲಯದ ಸಂಕಿರಣದಿಂದ ಮಿನಿವಿಧಾನ ಸೌಧದವರಗೆ ಮೆರವಣಿಗೆ ನಡೆಸಿ ವಿಧಾನ ಸೌಧದ ಮುಂಭಾಗ ಜಮಾಯಿಸಿದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಆರ್.ಸಿ. ಅಪ್ಪಾಜಿ ಗೌಡ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದಾ ಗೌಡ ರವರು ಪರಮಶಿವಯ್ಯ ವರಿದಿಯಂತೆ ಯೋಜನೆ ಜಾರಿಗೊಳಿಸಲು ಫಲವಿಲ್ಲದ ಎತ್ತಿನಹೊಳೆ ಯೋಜನೆಯನ್ನು ತೋರಿಸಿಕೊಂಡು ಅಡಚಣೆ ಮಾಡುತ್ತಿರುವುದು ದುರದೃಷ್ಟಕರ. ಇನ್ನಾದರೂ ಸರ್ಕಾರ ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿಬೇಕು. ಇಲ್ಲದಿದ್ದಲಿ ಸಂಘವು ಉಗ್ರ ಹೋರಾಟ ನೆಡೆಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಕಾರ್ಯದರ್ಶಿ ಎಚ್.ಎಲ್.ನಾಗರಾಜ್, ಸಹ ಕಾರ್ಯದರ್ಶಿ ವೆಂಕಟಾಚಲಪತಿ ಇದ್ದರು.

ಖಾತ್ರಿ ಕಾಮಗಾರಿಗಳಿಗೆ ಹಣ ಮಂಜೂರು
ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಿಗೆ ಒಟ್ಟು 3.25.24.800 ರು.ಗಳ ವೆಚ್ಚದ ಕ್ರಿಯಾ ಯೋಜನೆ ಪಟ್ಟಿ ತಯಾರಿಸಲಾಗಿದೆ. ಗ್ರಾಮಗಳ ಅಭಿವೃದ್ಧ್ದಿಕಾಮಗಾರಿಗಳ ಜೊತೆಗೆ ಈ ಬಾರಿ ಹೊಸ ಕಾಮಗಾರಿ ಕೆಲಸಗಳಾದ ಟ್ರಚ್ಚಿಂಗ್ ಮಲ್ಜಿಂಗ್ ದನ ಮತ್ತು ಕುರಿಗಳ ಕೊಟ್ಟಿಗೆ, ಜಲ್ಲಿ ಮತ್ತು ಕಾಂಕ್ರೀಟ್ ರಸ್ತೆಗಳನ್ನು ಮಾಡಿಕೊಳ್ಳುವ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಪಂಚಾಯ್ತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ರಾಮಪ್ಪ ತಿಳಿಸಿದರು. ರೇಷ್ಮೆ ಇಲಾಖೆಯ ಗುರ್ರಪ್ಪ ಮತ್ತು ಸಮಾಜ ಕಲ್ಯಾಣ ಇಲಾಖೆ ಶಾಂತಮ್ಮ ತಮ್ಮ ಇಲಾಖೆಗಳಲ್ಲಿನ ಸೌಲತ್ತುಗಳ ತಿಳಿಸಿಕೊಟ್ಟರು. ಇತರೆ ವಿವಿಧ ಇಲಾಖೆಗಳು ಗೈರು ಹಾಜರಿಯಾಗಿದ್ದರಿಂದ ಸಭೆಯಲ್ಲಿ ನೆರದಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ಬರದಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ವಕೀಲರಿಂದ ಶಾಶ್ವತ ನೀರಾವರಿಗೆ ಆಗ್ರಹಿಸಿ ಪ್ರತಿಭಟನೆ
ಶ್ರೀನಿವಾಸಪುರ: ಜಿಲ್ಲೆಗೆ ಶಾಶ್ವತ ನೀರಾವರಿ ಜಾರಿಗೆ ತರುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಧರಣಿ ನಡೆಸಿದರು. ಸರ್ಕಾರಗಳು ಜಿಲ್ಲೆಯ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಗಳಲ್ಲಿ ಶಾಶ್ವತ ನೀರಾವರಿ ಬಗ್ಗೆ ಬೊಗಳೆ ಬಿಟ್ಟು ಜನರನ್ನು  ಮರುಳು ಮಾಡುವ ರಾಜಕಾರಣಿಗಳಿ ರಾಜಕಾರಣಿಗಳು ಮತ ಪಡೆದು ಜನರ ಹಿತ ಮರೆಯುತ್ತಿವೆ ಎಂದು ಆರೋಪಿಸಿದರು. ಕಾಂಗ್ರೇಸ್ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಶಾಶ್ವತ ನೀರಾವರಿ ಜಾರಿಗೆ ತರದೆ ಎತ್ತಿನ ಹೊಳೆ ಯೋಜನೆಗೆ ತರಾತರಿಯಲ್ಲಿ ಶಂಕು ಸ್ಥಾಪನೆ ಮಾಡಲು ಮುಂದಾಗಿದೆ. ಆದರೆ ಪರಮಶಿವಯ್ಯ ವರದಿ ಆದರಿಸಿ ಜಿಲ್ಲೆಗೆ ಶಾಶ್ವತ ನೀರಾವರಿ ಒದಗಿಸಿಕೊಡಬೇಕೆಂದು ಇಲ್ಲವಾದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ರಾಮನಗರ ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡತೆ ಪ್ರತ್ಯೇಕ ಬಯಲು ಸೀಮೆ ರಾಜ್ಯ ಎಂದು ಘೋಷಣೆ ಮಾಡಲಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ವಕೀಲರಾದ ಕೆ. ಶಿವಪ್ಪ, ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಆರವಿಂದ,  ಮಾಜಿ ಅಧ್ಯಕ್ಷ ಟಿ. ವೆಂಕಟೇಶ್, ಎನ್.ವಿ. ಜಯರಾಮೇಗೌಡ,  ಕಾರ್ಯದರ್ಶಿ ಪಿ.ಆರ್. ವೆಂಕಟರೆಡ್ಡಿ ಇದ್ದರು.

'ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು'
ಚಿಕ್ಕಬಳ್ಳಾಪುರ: ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿಗೆ ಒತ್ತಡ ಹೇರುವುದರ ಬದಲಿಗೆ ಅವರ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು ಎಂದು ಐಸಿಎಸ್‌ಇ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ.ಎಂ.ಸಿ. ಥಾಮಸ್ ಅಭಿಪ್ರಾಯಪಟ್ಟರು. ನಗರದ ಹೊರವಲಯದಲ್ಲಿನ ಸಿ.ವಿ.ವಿ. ಕ್ಯಾಂಪಸ್ ನ ಕೆ.ವಿ. ಇಂಗ್ಲಿಷ್ ಶಾಲಾ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿಭ್ರಾಂತ್ ರಾಕ್-2014 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಮಾಜದ ಉನ್ನತ ಸ್ಥಾನಮಾನಗಳನ್ನು ಪಡೆಯಲು ಕೇವಲ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ನಿರ್ದಿಷ್ಟವಾದ ಗುರಿಯೊಂದಿಗೆ ವಿದ್ಯಾಭ್ಯಾಸ ಪಡೆಯಬೇಕು.ಪೋಷಕರು ಮಕ್ಕಳಲ್ಲಿ ಶ್ರದ್ಧೆ ಹಾಗೂ ಸಾಧಿಸುವ ಛಲ ಬೆಳೆಸಿ ಮಕ್ಕಳನ್ನು ಭವ್ಯ ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂದು ತಿಳಿಸಿದರು. ಕೆ.ವಿ. ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ತ್ಯಾಗರಾಜ್ ಶಾಲೆಯ ವರದಿ ಮತ್ತು ಕಾರ್ಯಕ್ರಮಗಳ ಬಗೆಗಿನ ವರದಿಯನ್ನು ವಾಚಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರೆದಿದ್ದ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು.

ಇಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಮಹತ್ವದ ಸಭೆ
ದೊಡ್ಡಬಳ್ಳಾಪುರ: ಇಲ್ಲಿನ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ನೇತೃತ್ವದಲ್ಲಿ ಹೋರಾಟದ ರೂಪರೇಷೆ ಕುರಿತ ಮಹತ್ವದ ಚರ್ಚೆ ಮತ್ತು ಮುಂದಿನ ಗಂಭೀರ ಸ್ವರೂಪದ ಹೋರಾಟಗಳ ಕುರಿತ ಚರ್ಚೆಗಾಗಿ ಪೂರ್ವಭಾವಿ ಸಭೆ ಫೆ.9ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕನ್ನಡ ಜಾಗೃತ ಭವನದಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಕೇಂದ್ರ ರಚನೆ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು, ಹೋರಾಟ ಸಾಗಬೇಕಾದ ಹಾದಿ ಮತ್ತು ಅದರಲ್ಲಿ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ವಹಿಸಬೇಕಾದ ನಿರ್ಣಾಯಕ ಪಾತ್ರದ ಕುರಿತು ಚರ್ಚೆ ನಡೆಸಲಾಗುವುದು. ಅರ್ಹತೆ ಪರಿಗಣಿಸಿ ಮತ್ತು ರಾಜ್ಯದ ಇತಿಹಾಸದಲ್ಲಿ ಜಿಲ್ಲಾ ಕೇಂದ್ರಗಳ ರಚನೆಗೆ ಈ ಹಿಂದೆ ಕೈಗೊಂಡಿದ್ದ ಮಾನದಂಡಗಳನ್ನೇ ಅನುಸರಿಸಿ ದೊಡ್ಡಬಳ್ಳಾಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂಬ ನ್ಯಾಯಬದ್ಧ ಒತ್ತಾಯಕ್ಕೆ ಸರ್ಕಾರ ಕಿವಿಗೊಡಬೇಕಿದೆ. ಅದನ್ನೂ ಮೀರಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿತವಾಗಬೇಕಿದ್ದು, ಸಭೆಯಲ್ಲಿ ವಿವಿಧ ಕನ್ನಡಪರ, ರೈತಪರ, ಮಹಿಳಾ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಭಾಗವಹಿಸಿ ಸಲಹೆ ನೀಡುವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement