ಅಕ್ರಮ ಮದ್ಯ ಮಾರಾಟ; ವ್ಯಕ್ತಿ ಬಂಧನ
ಬಂಗಾರಪೇಟೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಹಂಚಾಳ ಗೇಟ್ ಸಮೀಪ ಚಿಲ್ಲರೆ ಅಂಗಡಿ ನಡೆಸುತ್ತಿದ್ದು ಅಂಗಡಿಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಅಬಕಾರಿ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ರವಿಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಕ್ಷೇತ್ರದಲ್ಲಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ಸ್ಥಳೀಯ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಳ್ಳಿಗಳಿಗೆ ಭೇಟಿಯಿತ್ತಾಗ ಗ್ರಾಮಸ್ಥರು ಇದನ್ನು ನಿಯಂತ್ರಿಸಲು ಮನವಿ ಮಾಡಿದ್ದರು. ಈ ಬಗ್ಗೆ ತೀವ್ರ ಆಕ್ರೋಶಗೊಂಡಿದ್ದ ಶಾಸಕರು ಅಬಕಾರಿ ಅಧಿಕಾರಿಗಳ ವರ್ತನೆ ವಿರುದ್ಧ ಸಿಡಿಮಿಡಿಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಬಕಾರಿ ಪೊಲೀಸರು ಬುಧವಾರ ಹಂಚಾಳ ಬಳಿ ಚಿಲ್ಲರೆ ಅಂಗಡಿಗೆ ದಾಳಿ ಮಾಡಿ ಮದ್ಯ ವಶಪಡಿಸಿಕೊಂಡು ಆರೋಪಿ ರವಿಕುಮಾರ್‌ನನ್ನು ಬಂಧಿಸಿ ಕೋಲಾರದ ಅಬಕಾರಿ ಆಯುಕ್ತರ ಮುಂದೆ ಹಾಜರುಪಡಿಸಿದ್ದಾರೆ.
ಅವದಿ ಮುಗಿದ ಮದ್ಯ ನಾಶ: ಪಟ್ಟಣದ ಎಂಎಸ್‌ಐಎಲ್ ಗೋದಾಮಿನಲ್ಲಿದ್ದ ಅವಧಿ ಮೀರಿದ್ದ ಸುಮಾರು 17.50ಲಕ್ಷ ಬೆಲೆ ಬಾಳುವ ಮದ್ಯವನ್ನು ನಾಶಮಾಡಿದ್ದಾರೆ. ಕುಡಿಯಲು ಯೋಗ್ಯವಾಗದ 750ಲೀ ಮಧ್ಯ ಹಾಗೂ 600ಲೀ ಬಿಯರ್ ಸೇರಿದಂತೆ ಒಟ್ಟು 17.50ಲಕ್ಷ ರು. ಮದ್ಯವನ್ನು ಶಿರಸ್ತೇದಾರ್ ದೇವರಾಜ್ ಸಮ್ಮುಖದಲ್ಲಿ ನಾಶಗೊಳಿಸಿದ್ದಾರೆ. ಈ ಸಂಬರ್ದದಲ್ಲಿ ಅಬಕಾರಿ ಡಿವೈಎಸ್ಪಿ ಚಂದ್ರಪ್ಪ, ಸಿಐ ತಿಮ್ಮಾರೆಡ್ಡಿ ಇದ್ದರು.
ಅಪಘಾತ; ವ್ಯಕ್ತಿ ಸಾವು
ಗೌರಿಬಿದನೂರು: ಲಾರಿಯೊಂದು ಹಿಂದಕ್ಕೆ ವೇಗವಾಗಿ ಬಂದಿದ್ದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬ ವ್ಯಕ್ತಿ ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿ ಮಿಣಕಿನ ಗುರ್ಕಿ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಚೇತನ್ ಕುಮಾರ್ (21) ಗಾಯಗೊಂಡಿರುವ ಆವುಲಕೊಂಡಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಿಗ್ಗೆ ಸಿಮೆಂಟ್ ಇಟ್ಟಿಗೆ ಲಾರಿ ಚಲಿಸುತ್ತಿದ್ದಾಗ ಲಾರಿಯ ಹಿಂಭಾಗದಲ್ಲಿಯೇ ಬರುತ್ತಿದ್ದ ಬೈಕ್ ಮೇಲೆ ಲಾರಿ ಏಕಾಏಕಿ ಹಿಂದಕ್ಕೆ ವೇಗವಾಗಿ ಬಂದಿದ್ದರಿಂದ ಘಟನೆ ಸಂಭವಿಸಿದೆ.