ಕೊಳಚೆ ನೀರು ಶುದ್ಧಿಕರಿಸಿ ಕೆರೆಗಳಿಗೆ ಹರಿಸಲು ಆಗ್ರಹ
ಕೋಲಾರ: ಬೆಂಗಳೂರಿನಿಂದ ವ್ಯರ್ಥವಾಗಿ ಹರಿದು ತಮಿಳುನಾಡು ಸೇರುತ್ತಿರುವ ಕೊಳಚೆ ನೀರನ್ನು ಸಂರಕ್ಷಿಸಿ ಜಿಲ್ಲೆಯ ಮಾಲೂರು ಹಾಗೂ ಬಂಗಾರಪೇಟೆ ತಾಲೂಕಿನ ಕೆರೆಗಳಿಗೆ ಹರಿಸುವಂತೆ ಹಾಗೂ ಫೆ.14ರಂದು ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಹಣ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡರು ಮಾಲೂರಿನಿಂದ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನೂರಾರು ಮುಖಂಡರು ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಬ್ಬಣಿಶಿವಪ್ಪ ಜಿಲ್ಲೆಯು ಸತತವಾಗಿ ಬರಗಾಲಕ್ಕೆ ತುತ್ತಾಗುತ್ತಿದ್ದು, ಈ ನಿಟ್ಟಿನಲ್ಲಿ ಶಾಶ್ವತವಾದ ಪರ್ಯಾಯ ಯೋಜನೆಯನ್ನು ಕಲ್ಪಿಸಬೇಕಾಗಿರುವ ಇರಯಾದೆ ಯಾಮೊಬ್ಬ ಜನಪ್ರತಿನಿಧಿಗಳಿಗೂ ಇಲ್ಲ. ಜೊತೆಗೆ ಜಿಲ್ಲೆಯ ಸಾರ್ವಜನಿಕರು ಸಹ ನೀರಾವರಿ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಜಿಲ್ಲೆಯು ಮರಳುಗಾಡಾಗಲಿದೆ ಎಂದು ಭವಿಷ್ಯ ನುಡಿದರು.
ಮಾಲೂರು ತಾಲೂಕು ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ಜಿಲ್ಲಾಧ್ಯಕ್ಷ ಕೊತ್ತಮಿರಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಬಿಸನಹಳ್ಳಿ ಬೈಚೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಜಿ. ನಾರಾಯಣಸ್ವಾಮಿ, ಕೋಡೂರು ಗೋಪಾಲ್, ಪ್ರಧಾನ ಕಾರ್ಯದರ್ಶಿ ತಿರುಮಲಹಟ್ಟಿ ದೇವರಾಜ್ ಇತರರು ಇದ್ದರು.
ಕೋಡಿಹಳ್ಳಿ ನೇತೃತ್ವದಲ್ಲಿ ರ್ಯಾಲಿ
ಮಾಲೂರು: ತಮಿಳುನಾಡಿಗೆ ವ್ಯರ್ಥವಾಗಿ ಹರಿಯುತ್ತಿರುವ ಬೆಂಗಳೂರಿನ ಒಳಚರಂಡಿ ನೀರನ್ನು ಮಾಲೂರು-ಕೋಲಾರ-ಬಂಗಾರಪೇಟೆ ತಾಲೂಕುಗಳಿಗೆ ಹರಿಸುವ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಸ್ಥಳೀಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಾಲೂರಿನಿಂದ ಕೋಲಾರದ ಜಿಲ್ಲಾಧಿಕಾರಿ ಕಚೇರಿವರೆಗೆ ಬುಧವಾರ ಬೈಕ್ ರ್ಯಾಲಿ ನಡೆಸಿದರು.
ಪಟ್ಟಣದ ಮಿನಿ ವಿಧಾನಸೌಧದಿಂದ ಹೂರಟ ಬೈಕ್ ರ್ಯಾಲಿಗೆ ಚಾಲನೆ ನೀಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನದಿ-ಜಲಾಶಯವಿಲ್ಲದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ. ಬಹಳಷ್ಟು ರೈತರು ಅತ್ಮಹತ್ಯೆಗೆ ಶರಣಾಗುವ ಸ್ಥಿತಿಗೆ ತಲುಪುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಬೆಂಗಳೂರಿನಿಂದ ಹರಿಯುತ್ತಿರುವ ಕೊಳಚೆ ನೀರನ್ನು ಕೋಲಾರ ಜಿಲ್ಲೆಯ ತಾಲೂಕಿಗಳ ಕರೆಗಳಿಗೆ ಹರಿಸುವ ಯೋಜನೆ ಉಪಕಾರಿಯಾಗಲಿದೆ. ಮೈಸೂರಿನ ಕೆಆರ್ಎಸ್ ಬತ್ತಿದ್ದರೂ ಬೆಂಗಳೂರಿನ ಕೊಳಚೆ ನೀರು ಬತ್ತದಿರುವುದರಿಂದ ರಾಜ್ಯ ಸರ್ಕಾರ ಈ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆಯನ್ನು ಮುಂದಿನವಾರ ಬರಲಿರುವ ರಾಜ್ಯ ಬಜ್ಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿ ಹಣ ಮೀಸಲಿಡಬೇಕು ಎಂದು ಅಗ್ರಹಿಸಿದರು. ತಾಲೂಕು ಅಧ್ಯಕ್ಷ ಬೆಂಡಶೆಟ್ಟಿಹಳ್ಳಿ ರಮೇಶ್, ದೇವರಾಜ್, ಕೋಡೂರು ಗೋಪಾಲ್,ನಿದರಮಂಗಲ ನಾಗಪ್ಪ, ವರದಾಪುರ ನಾಗರಾಜ್, ವಿಶ್ವನಾಥ್, ನಾರಾಯಣಸ್ವಾಮಿ ಇದ್ದರು.