ವಿಚಾರ ಸಾಹಿತ್ಯ ಆಧರಿಸಿದ ಸಮ್ಮೇಳನಗಳು ಬೇಕು
ಕೋಲಾರ,(ಡಾ.ಸಿ.ಎನ್.ಆರ್.ರಾವ್ ವೇದಿಕೆ)
ಮನುಷ್ಯನ ತಪ್ಪುಗಳಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ನಿಸರ್ಗದ ಮೇಲೆ ದುಷ್ಪರಿಣಾಮಗಳಾಗುತ್ತಿರುವುದರಿಂದ ವಿಚಾರ ಸಾಹಿತ್ಯದ ಮೂಲಕ ಹದಗೆಟ್ಟಿರುವ ನೆಲವನ್ನು ಹದಗೊಳಿಸಬೇಕಾದ ಕರ್ತವ್ಯ ಎಲ್ಲರದ್ದಾಗಿದೆ ಎಂದು ಸಾಹಿತಿ ಹಾಗೂ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ಚಂದ್ರಶೇಖರ ನಂಗಲಿ ಕರೆ ನೀಡಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪೀಠದಲ್ಲಿ ನಿಂತು ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಪ್ರತಿಯೊಬ್ಬರಲ್ಲೂ ಭೌತಿಕ ಸಾಮರ್ಥ್ಯ ಹೆಚ್ಚಬೇಕಾಗಿದೆ. ಇದಕ್ಕಾಗಿ ವಿಚಾರ ಸಾಹಿತ್ಯವನ್ನು ಆಧರಿಸಿದ ಸಮ್ಮೇಳನಗಳು ಅಗತ್ಯ, ಮನುಷ್ಯನ ತಪ್ಪುಗಳಿಂದ ನೆಲ, ಜಲದ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಜಾಗೃತಗೊಳ್ಳದಿದ್ದರೆ ನೈಸರ್ಗಿಕ ಸಂಪತ್ತು ಮತ್ತಷ್ಟು ಲೂಟಿಯಾಗಿ ಜಿಲ್ಲೆ ಬರಡು ಭೂಮಿ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಹಿತ್ಯವೆಂದರೆ ಕೇವಲ ಒಂದು ಬಗೆಯ ಓದು ಅಲ್ಲ. ಎಲ್ಲ ಬಗೆಯ ಓದುಗಳು ಸಮ್ಮಿಶ್ರವಾಗಬೇಕು, ಇದನ್ನೇ ಭೂಮಿತಾಯಿ ಓದು ಎಂದು ಪರಿಭಾವಿಸಿ ಹದಗೆಟ್ಟ ನೆಲವನ್ನು ಹದಗೊಳಿಸಲು ಪ್ರಯತ್ನಿಸದಿದ್ದರೆ ನಾಗರಿಕತೆ ನಾಶವಾಗುತ್ತದೆ ಎಂದರು.
ನಾಗರಿಕರಾಗುವುದೆಂದರೆ ನಿಸರ್ಗದಿಂದ ದೂರಾಗುವುದು, ಶಿಕ್ಷಿತರಾಗುವುದೆಂದರೆ ಕನ್ನಡದಿಂದ ದೂರವಾಗುವುದು, ಸೈಬರೀಕರಣವೆಂದರೆ ಜನ ಸಮುದಾಯದಿಂದ ದೂರ ಸರಿಯುವುದು ಎಂಬಂತಾಗಿದೆ. ಇದಕ್ಕೆ ಭೂಮಿತಾಯಿ ತತ್ವದ ಬಗ್ಗೆ ಅರಿವು ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ, ಸಕಲ ಜೀವರಾಶಿಯ ಅನ್ನನಿಧಿಯಾಗಿ ನಮ್ಮನ್ನು ಹೆತ್ತು, ಹೊತ್ತು, ಪೋಷಿಸುತ್ತಿರುವ ಭೂಮಿತಾಯಿಯ ನಿರ್ವಹಣೆಯು ಆಧುನಿಕ ನಾಗರೀಕತೆಯ ಕಾಲದಲ್ಲಿ ಹೇಗಿತ್ತು ಎಂಬ ಬಗ್ಗೆ ಚಿಂತನೆ ಅಗತ್ಯ ಎಂದರು.
ಕಾಡುಗಳ ಲೂಟಿ
ಕೋಲಾರಮ್ಮನ ಮಡಿಲಿನಲ್ಲಿದ್ದ ದಟ್ಟ ಕುರುಚಲು ಕಾಡುಗಳೆಲ್ಲ ನಿರಂತರ ಲೂಟಿಗೊಳಗಾಗಿದೆ. ಮಳೆ ನೀರನ್ನು ಸ್ಪಂಜಿನಂತೆ ತನ್ನಲ್ಲಿ ಶೇಖರಿಸಿಟ್ಟುಕೊಳ್ಳುವ ಭೂಮೇಲ್ಮೈ ಮತ್ತು ಭೂಗರ್ಭದ ಮರಳರಾಶಿಯನ್ನು ಕಳ್ಳ ಕಾಕರಂತೆ ದರೋಡೆ ಮಾಡುತ್ತಾ ಕಸಲ ಜೀವರಾಶಿಯ ಪಾಲಿಗೆ ಅನ್ನಪೂರ್ಣೆಯಾಗಿದ್ದ ಕೋಲಾರಮ್ಮನನ್ನು ನಾವಿಂದು ಬಂಜೆಯಾಗಿಸುವಲ್ಲಿ ಯಶಸ್ವಿಯಾಗಿದ್ದೇವೆಂದು ವಿಷಾಧಿಸಿದರು.
ನಂಗಲಿ ಕೆರೆ ಸೇರಿದಂತೆ ಜಿಲ್ಲೆಯ ಬಹುತೇಕ ಕೆರೆಗಳು 2000ರಿಂದ 2002ರ ಅವಧಿಯಲ್ಲಿ ಅನೇಕ ಸಾರಿ ಭರ್ತಿಯಾಗಿ ಹಸಿರು ಪರಿಸರ ಕಾಣುವಂತಾಗಿತ್ತು. ಈಗ ಬಹುತೇಕ ಎಲ್ಲಾ ಕೆರೆಗಳು ಬರಡಾಗಿವೆ. ರಾಜಕಾಲುವೆಗಳು ಚರಂಡಿಗಳಾಗಿ ಮಾರ್ಪಟ್ಟಿವೆ. 12 ವರ್ಷಗಳಿಂದ ನಂಗಲಿ ಕೆರೆ ತುಂಬಿಯೇ ಇಲ್ಲ, ಗೌರಿಬಿದನೂರು, ಚಿತ್ರಾವತಿಯ ಮಡಿಲನ್ನು ಬರಿದು ಮಾಡಿದ ಮರಳುಗಣಿಗಾರಿಕೆಯ ಕಬಂಧ ಬಾಹುಗಳು ಮುಳಬಾಗಿಲಿನ ಕೌಂಡಿನ್ಯ ನದಿರಯ ಮಡಿಲಿಗೂ ಚಾಚಿಕೊಂಡು ಈ ಪ್ರದೇಶದಲ್ಲೂ ಮರಳು ಗಣಿಗಾರಿಕೆಯ ಅಟ್ಟಹಾಸ ಮೆರೆಯುತ್ತಿದೆ ಎಂದು ನೊಂದು ನುಡಿದರು.
ಸ್ಥಳೀಯ ವಿದ್ಯಮಾನಗಳ ಹಿಂದೆ ಜಾಗತಿಕ ತಾಪಮಾನವಿರುವುದನ್ನು ಅರ್ಥಮಾಡಿಕೊಳ್ಳದಿದ್ದರೆ ನಮಗೆ ಯಾಥಾರ್ಥ ಸತ್ಯದ ದರ್ಶನವಾಗುವುದಿಲ್ಲ, ಇಂದು ಉನ್ನತ ಶಿಕ್ಷಣದಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಹೊಟೇಲ್ ಮ್ಯಾನೇಜ್ಮೆಂಟ್ ಮುಂತಾದ ಕೋರ್ಸುಗಳು ವ್ಯಾಪಾರಿ ದೃಷ್ಟಿಯಲ್ಲಿ ಸಾಗುತ್ತಿದ್ದು, ನಮ್ಮ ದೇಶಕ್ಕೆ ಅಗತ್ಯವಾಗಿ ಬೇಕಾದ ನಿಸರ್ಗ ನಿರ್ವಹಣೆಯ ಮ್ಯಾನೇಜ್ಮೆಂಟ್, ಘನತ್ಯಾಜ್ಯ(ವೇಸ್ಟ್ ನಿರ್ವಹಣಾ) ಕೋರ್ಸುಗಳು ಪ್ರಾರಂಭಕ್ಕೆ ಸರ್ಕಾರ ಗಮನ ನೀಡಬೇಕೆಂದು ಸಲಹೆ ನೀಡಿದರು.