ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಲೂಗಡ್ಡೆ ಬೆಳೆಗೆ ವಿಶೇಷ ಪ್ಯಾಕೇಜ್ ಕಾರ್ಯಕ್ರಮ

Vishwanath S
Updated On : 14 Feb 2014, 12:32 pm

ಕೋಲಾರ: ತೋಟಗಾರಿಕೆ ಇಲಾಖೆಯಿಂದ ಆಲೂಗಡ್ಡೆ ಬೆಳೆಗೆ ಬರುವ ಕೊನೆ ಅಂಗಮಾರಿ ರೋಗವನ್ನು ನಿಯಂತ್ರಿಸಲು 2013-14 ನೇ ಸಾಲಿನ ಆಲೂಗಡ್ಡೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ಫಲಾನುಭವಿಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ 6,000 ರು. ಸಹಾಯಧನ ನೀಡಲಾಗುವುದು.   ಸಹಾಯಧನವನ್ನು ಜೈವಿಕ ಗೊಬ್ಬರಗಳ ಬಳಕೆ, ಶಿಲೀಂಧ್ರನಾಶಕಗಳು, ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿ, ಬೆಳೆ ವಿಮೆ ಹಾಗೂ ಸಾವಯವ ಗೊಬ್ಬರಗಳ ಬಳಕೆಗಾಗಿ ನೀಡಲಾಗುವುದು. ಅರ್ಜಿಯೊಂದಿಗೆ ಪಹಣಿ, ಬೆಳೆ ದೃಢೀಕರಣ, ಶಿಲೀಂದ್ರ ನಾಶಕಗಳನ್ನು ಖರೀದಿಸಿದ ಬಿಲ್ಲು, ಸಸ್ಯ ಸಂರಕ್ಷಣಾ ಔಷಧಗಳನ್ನು ಖರೀದಿಸಿದ ಬಿಲ್ಲು, ಸ್ವಯಂ ಘೋಷಿತ ಪತ್ರ, ಪ.ಜಾತಿ ಅಥವಾ ಪ.ಪಂಗಡ ಅರ್ಜಿದಾರರಾದಲ್ಲಿ ಜಾತಿ ಪ್ರಮಾಣ ಪತ್ರ, ಅರ್ಜಿದಾರರು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪ್ರತಿ ಈ ದಾಖಲಾತಿಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಪಂ, ಕೋಲಾರ ರವರ ಕಚೇರಿಯಲ್ಲಿ ಪಡೆಯಬಹುದಾಗಿದೆ.
'ನಕಲಿ ದಾಖಲೆ ನಿಯಂತ್ರಿಸಿ'
ಶ್ರೀನಿವಾಸಪುರ: ತಾಲೂಕಿನ ಬ್ಯಾಂಕುಗಳಲ್ಲಿ ಸಾಲ ಪಡೆಯಲು ನಕಲಿ ದಾಖಲೆ ಸೃಷ್ಟಿಸುವ ಜಾಲ ಹುಟ್ಟಿಕೊಂಡು ಅಸಲಿ ಫಲಾನುಭವಿಗಳನ್ನು ವಂಚಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ. ಬ್ಯಾಂಕುಗಳಲ್ಲಿ ಸಾಲ ಪಡೆಯಲು ಕಂದಾಯ ಇಲಾಖೆಯಲ್ಲಿ ಆರ್‌ಟಿಸಿ, ಮೂಲ ಫಹಣಿ ಇಲ್ಲದಿದ್ದರೂ ಫಹಣಿಗಳನ್ನು ತಯಾರಿಸಿಕೊಡುವ, ಚುನಾವಣಾ ಗುರುತಿನ ಚೀಟಿ ತಯಾರಿಸುವುದು ಹಾಗೂ ಇಸಿ ಯಲ್ಲಿ ಸಾಲ ಬರುತ್ತಿದ್ದರೂ ಋಣ ಮುಕ್ತರಾಗಿದ್ದಾರೆಂದು... ಹೀಗೆ ನಕಲಿ ದಾಖಲೆಗಳನ್ನು ಸಿದ್ಧಪಡಿಸುವ ಜಾಲಗಳು ಇದ್ದು ಇದರಿಂದ ಅರ್ಹ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಇಲಾಖೆಯವರು ಹಾಗೂ ಉಪನೋಂದಣಾಧಿಕಾರಿಗಳ ಕಚೇರಿಯವರು ಎಚ್ಚೆತ್ತುಕೊಂಡು ನಕಲಿ ದಾಖಲೆ ಸೃಷ್ಟಿಸುವ ಜಾಲಗಳ ಬಗ್ಗೆ ಗಮನ ಹರಿಸಿ ಇದಕ್ಕೆ ಕಡಿವಾಣ ಹಾಕಬೇಕೆಂದು ಅರ್ಹ ರೈತರು ಒತ್ತಾಯಿಸಿದ್ದಾರೆ.
16 ರಂದು ಗೆಗ್ಗಿಲರಾಳ್ಳಹಳ್ಳಿ ಹಾಲು ಉತ್ಪಾದಕರ ಸಂಘದ 7 ಸ್ಥಾನಕ್ಕೆ ಚುನಾವಣೆ
ಗುಡಿಬಂಡೆ: ತಾಲೂಕಿನ ಗೆಗ್ಗಿಲರಾಳ್ಳಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ 5 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಕ್ಕೆ ಫೆ.16 ರಂದು ಚುನಾವಣೆ ನಡೆಯಲಿದೆಯೆಂದು ಚುನಾವಣಾಧಿಕಾರಿ ಎ.ಎಸ್. ಗಣೇಶ್ ತಿಳಿಸಿದ್ದಾರೆ.
ಹಿಂದುಳಿದ ವರ್ಗದ ಕ್ಷೇತ್ರದಿಂದ ಶ್ರೀನಿವಾಸ್, ಪ.ಜಾತಿ,ಪ.ಪಂಗಡ ಕ್ಷೇತ್ರದಿಂದ ಚನ್ನರಾಯಪ್ಪ, ಮಹಿಳಾ ಕ್ಷೇತ್ರದಿಂದ ಸುವರ್ಣಮ್ಮ ಮತ್ತು ಲಕ್ಷ್ಮೀದೇವಮ್ಮ ಅವಿರೋಧವಾಗಿ ಆಯ್ಕೆಯಾದರೆ, ಉಳಿದ 7 ಸ್ಥಾನಗಳಿಗೆ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಆದಿನಾರಾಯಣಪ್ಪ, ಚಿನ್ನಪ್ಪರೆಡ್ಡಿ, ಎನ್.ಸಿ. ತಿಪ್ಪಾರೆಡ್ಡಿ, ಜಿ.ಎಸ್.ನರಸಿಂಹರೆಡ್ಡಿ, ಟಿ.ಎಂ. ನಾಗರಾಜ, ನಾರಾಯಣಸ್ವಾಮಿ, ಪಿಳ್ಳವೆಂಕಟಪ್ಪ, ಮುನಿಕೃಷ್ಣಪ್ಪ, ಮುನಿಚೌಡಪ್ಪ, ಎಂ. ಮುನಿಯಪ್ಪ, ರಾಮಕೃಷ್ಣಪ್ಪ ಮತ್ತು ವೆಂಕಟರೆಡ್ಡಿ ಒಟ್ಟು 13 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ನಮೋ ಸ್ಟಾಲ್ ಉದ್ಘಾಟನೆ
ಮುಳಬಾಗಲು: ಕಾಂಗ್ರೆಸ್ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯ ಮುಖಂಡ ವೈ. ಸುರೇಂದ್ರಗೌಡ ಹೇಳಿದರು. ಪಟ್ಟಣದ ಸೌಂದರ್ಯ ಪ್ಯಾರಡೈಸ್ ಹೊಟೇಲ್ ಮುಂಭಾಗ ಬಿಜೆಪಿ ಯುವ ಮೋರ್ಚ ವತಿಯಿಂದ ಪ್ರಾರಂಭಿಸಿರುವ ನಮೋ ಟೀ ಸ್ಟಾಲ್‌ಗೆ ಚಾಲನೆ ನೀಡಿ ಮಾತನಾಡಿ, ದೇಶದ ಭವಿಷ್ಯ ಉತ್ತಮಗೊಳಿಸಲು ಹಾಗೂ ನವ ಸಮಾಜದ ನಿರ್ಮಾಣ ಮೋದಿಯವರಿಂದ ಮಾತ್ರ ಸಾಧ್ಯವೆಂದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಅತ್ತಿಹಳ್ಳಿ ವೆಂಕಟರವಣ, ಕಾರ್ಯದರ್ಶಿ ಎಚ್.ಎಸ್. ಹರೀಶ್, ಮಾಜಿ ಅಧ್ಯಕ್ಷ ಸಿ.ಕೆ. ರಾಧವಲ್ಲಭಗೌಡ, ಯುವ ಮೋರ್ಚ ಜಿಲ್ಲಾಧ್ಯಕ್ಷ ಪ್ರಮೋದ್, ತಾಲೂಕು ಅಧ್ಯಕ್ಷ ಸಿ.ವಿ. ಶ್ರೀನಿವಾಸ್, ಎಸ್ಸಿ ಮೋರ್ಚ ಅಧ್ಯಕ್ಷ ವಿ. ಜಯಪ್ಪ, ಬಿಜೆಪಿ ಮುಖಂಡ ಶ್ರೀರಾಮಯ್ಯ, ಕೆ.ಅಮರೇಶ್, ಕೋಳಿ ನಾಗರಾಜ್, ಎಂ. ಶಂಕರಪ್ಪ, ಸುರೇಶ್, ಎಂ.ಪಿ. ಅನಿಲ್‌ಕುಮಾರ್ ಇದ್ದರು.
ಆರೋಗ್ಯ ಸೇವೆಗೆ 104 ಕ್ಕೆ ಕರೆ ಮಾಡಿ
ಕೋಲಾರ: ಪ್ರತಿಯೊಬ್ಬರಿಗೂ ಸುಲಭವಾಗಿ ಆರೋಗ್ಯ ಸೇವಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸರ್ಕಾರದ ಸಂಕಲ್ಪವಾಗಿದೆ. 104 ಕ್ಕೆ ಕರೆಮಾಡಿ ತುರ್ತಾಗಿ ಆರೋಗ್ಯ ಸೇವಾ ವಿವರಗಳು ವೈದ್ಯಕೀಯ ಸಲಹೆಗಳು, ತಜ್ಞ ವೈದ್ಯರ ಸಲಹೆಗಳನ್ನು ಪಡೆದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಸೇವೆಯು ದಿನದ 24 ಗಂಟೆಯೂ ಹಾಗೂ ವರ್ಷದ 365 ದಿನಗಳು ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕ ಆರೋಗ್ಯ ಸುಧಾರಣಾ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಾರಿಗೆ ತಂದಿರುವ 104 ಆರೋಗ್ಯ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ಫಯಾಜ್ ಖಾನ್ ತಿಳಿಸಿದ್ದಾರೆ.
ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ
ಕೋಲಾರ: ಜಿಲ್ಲೆಯ 5 ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಪಂ ವಿವಿಧ ಕ್ಷೇತ್ರಗಳಿಗೆ  ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಆಧಿಸೂಚನೆ ಪ್ರಕಟಿಸಿದ್ದಾರೆ.
ಫೆ.19 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಫೆ.20 ನಾಮಪತ್ರಗಳ ಪರಿಶೀಲನೆ. ಫೆ.22 ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು ಅಗತ್ಯ ಬಿದ್ದರೆ ಮಾ.2 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.  ಮಾ.5 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಾನದಲ್ಲಿ ಮತ ಎಣಿಕೆ ನಡೆಯಲಿದೆ.
ಕೋಲಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಪಂ ಕ್ಷೇತ್ರಕ್ಕೆ-ಪರಿಶಿಷ್ಟ ಜಾತಿ ಮೀಸಲಾತಿ,  ತೊಟ್ಲಿ ಗ್ರಾಪಂಗೆ-ಪರಿಶಿಷ್ಟ ಜಾತಿ, ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಪಂಗೆ ಹಿಂದುಳಿದ ವರ್ಗ ಅ,  ದಿನ್ನಹಳ್ಳಿ ಗ್ರಾಪಂ ದುಡುವನಹಳ್ಳಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಮಹಿಳೆ),  ಬಂಗಾರಪೇಟೆ ತಾಲೂಕಿನ ಸೂಲಿಕುಂಟೆ ಗ್ರಾಪಂ ಸಿದ್ದನಹಳ್ಳಿ-2 ಕ್ಷೇತ್ರಕ್ಕೆ ಹಿಂದುಳಿದ ವರ್ಗ ಅ, ಪರಿಶಿಷ್ಟ ಜಾತಿ,  ಹುಲಿಬೆಲೆ ಗ್ರಾಪಂ ತೊರಗನದೊಡ್ಡಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ, ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಪಂಗೆ ಪರಿಶಿಷ್ಟ ಜಾತಿ (ಮಹಿಳೆ),  ಅಂಗೊಂಡಹಳ್ಳಿ ಗ್ರಾಪಂ ಬೊಮ್ಮಸಂದ್ರ ಕ್ಷೇತ್ರಕ್ಕೆ-ಸಾಮಾನ್ಯ,  ಶ್ರೀನಿವಾಸಪುರ ತಾಲೂಕಿನ ಜೆ. ತಿಮ್ಮಸಂದ್ರ ಗ್ರಾಪಂ ಕಲ್ಲೂರು ಕ್ಷೇತ್ರಕ್ಕೆ-ಸಾಮಾನ್ಯ, ಚಲ್ದಿಗಾನಹಳ್ಳಿ ಗ್ರಾಪಂ ಕೇತಗಾನಹಳ್ಳಿ ಕ್ಷೇತ್ರಕ್ಕೆ-ಪರಿಶಿಷ್ಟ ಜಾತಿ,  ಮಾಸ್ತೇನಹಳ್ಳಿ ಗ್ರಾಪಂಗೆ ಪರಿಶಿಷ್ಟ ಜಾತಿ(ಮಹಿಳೆ) ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಸಭೆಗೆ ಅಧಿಕಾರಿಗಳ ಗೈರು
ಚಿಂತಾಮಣಿ: ತಾಲೂಕಿನ ಕೈವಾರ ಗ್ರಾಪಂ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಖಾತ್ರಿ ಯೋಜನೆಯ 15 ಅಂಶಗಳ ಕಾರ್ಯಕ್ರಮದ ಗ್ರಾಮ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಗ್ರಾಪಂ ಅಧ್ಯಕ್ಷೆ ಮುಬೀನಾ ತಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಅಂಶಗಳ ಚರ್ಚೆ ನಡೆಯಬೇಕಿತ್ತು. ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ರಾಮಚಂದ್ರಪ್ಪ, ಕೆ.ಎನ್. ರವಿ, ಶೈಲಜಾ ಮಂಜುನಾಥ್, ಫರೀದಾ ಇದ್ದರು.
ಪೆಟ್ರೋಲ್ ಬಂಕ್ ದರೋಡೆ
ಕೋಲಾರ: ತಾಲೂಕಿನ ಸುಗಟೂರು ಗ್ರಾಮದ ಬಳಿಯ ಬೀರೇಶ್ವರಿ ಪೆಟ್ರೋಲ್ ಬಂಕ್‌ನಲ್ಲಿ ಬುಧವಾರ ಮಧ್ಯ ರಾತ್ರಿ ದರೋಡೆ ನಡೆದಿದೆ. ಮೂರು ಬೈಕ್‌ಗಳಲ್ಲಿ ಬಂದಿದ್ದ 6 ಮಂದಿ ಅಪರಿಚಿತರು ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಕ್ಯಾಷಿಯರ್ ಚೌಡರೆಡ್ಡಿ ಅವರಿಗೆ ಲಾಂಗ್ ತೋರಿಸಿ ಬೆದರಿಸಿ, ಅವರ ಬಳಿ ಇದ್ದ 70 ಸಾವಿರ ರು.ಗಳನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸಿ: ರಿಜ್ವಾನ್
ಕೋಲಾರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತರುವ ಮೂಲಕ ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಲು ಯುವ ಕಾರ್ಯಕರ್ತರು ಶ್ರಮಿಸಬೇಕೆಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷಾದ್ ಕರೆ ನೀಡಿದರು.
ಚಾಯ್ ಪೇ ಚರ್ಚಾ ಕಾರ್ಯಕ್ರಮ
ಕೆಜಿಎಫ್: ಕ್ಷೇತ್ರದ ಬಿಜೆಪಿ ನಗರಾಧ್ಯಕ್ಷ ಸುರೇಶ್‌ನಾರಾಯಣ್ ನೇತೃತ್ವದಲ್ಲಿ ಚಾಯ್ ಪೇ ಚರ್ಚಾ ನಮೋ ಜೊತೆ 1,000 ಸ್ಥಳಗಳಲ್ಲಿ, 300 ನಗರಗಳಲ್ಲಿ ಒಂದೇ ದಿನ ಒಂದೇ ಸಮಯ ಎಂಬ ಕಾರ್ಯಕ್ರಮವನ್ನು ನಗರದ ಪ್ರಿಚರ್ಡ್‌ರಸ್ತೆಯ ಸರವಣ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರು ಟೀ ಮಾರಾಟ ಮಾಡುತ್ತಿದ್ದವರು ಅವರನ್ನು ದೇಶದ ಪ್ರಧಾನಿ ಮಾಡಲು ಹೊರಟಿರುವುಗದಾಗಿ ಕಾಂಗ್ರೆಸ್ ಟೀಕಿಸಿರುವ ಹಿನ್ನಲೆಯಲ್ಲಿ ನರೇಂದ್ರ ಮೋದಿಯವರು ಟೀ ಮಾರಾಟದ ಮೂಲಕ ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ಮಾಡಲಿದ್ದಾರೆ ಎಂದರು. ದೇಶದೆಲ್ಲೆಡೆ ನರೇಂದ್ರ ಮೋದಿ ಪರ ಅಲೆ ಎದ್ದಿರುವ ಹಿನ್ನಲೆಯಲ್ಲಿ ಸೋಲನ್ನು ಅರಿತ ಕಾಂಗ್ರೆಸ್ ಪಕ್ಷ ವಿನಾಕಾರಣ ಟೀಕೆ ಮಾಡುತ್ತಿದೆ ಆದರೆ ಬಿಜೆಪಿ ಇಂತಹ ಟೀಕೆಗಳಿಗೆ ಹೆದರುವುದಿಲ್ಲ ಎಂದರು. ಈ ವೇಳೆ ಕಾರ್ಯದರ್ಶಿ ಬಾಟಾಗೋಪಾಲ್, ನಗರಸಭಾ ಸದಸ್ಯ ವಿಜಯಕುಮಾರ್, ರವಿ, ಮೇಘನಾಥ್, ನೈನಾರವಿ, ನವೀನ್‌ಜೈನ್, ಪೈಜಾಮಾ ಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement