ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಂದಿನಿಂದ ಎಸ್‌ಎಫ್‌ಐ ಪ್ರತಿನಿಧಿ ಅಧಿವೇಶನ

Vishwanath S
Updated On : 14 Feb 2014, 11:37 am

ಕೋಲಾರ: ನಗರದಲ್ಲಿ ನಡೆಯುತ್ತಿರುವ ಎಸ್‌ಎಫ್‌ಐ 13ನೇ ರಾಜ್ಯ ಸಮ್ಮೇಳನದ 2ನೇ ದಿನವಾದ ಫೆ.15 ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿನಿಧಿ ಅಧಿವೇಶನ ಆರಂಭವಾಗಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್‌ಎಫ್‌ಐ ಅಖಿಲ ಭಾರತ ಅಧ್ಯಕ್ಷ ಡಾ. ಶಿವದಾಸನ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಅಧ್ಯಕ್ಷ ಎಂ.ವಿ. ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ. ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಅನಂತನಾಯ್ಕ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಹುಳ್ಳಿ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಏಕರೂಪ ಸಮಾನ ಶಿಕ್ಷಣ ರೂಪಿಸಿ: ನಟ ಚೇತನ್
ಕೋಲಾರ: ವಿದ್ಯಾರ್ಥಿಗಳು ತಮ್ಮ ಹಿತ ಕಾಪಾಡುವ ಎಸ್.ಎಫ್.ಐ ಸಂಘಟನೆಗೆ ಬೆಂಬಲ ನೀಡಬೇಕೆಂದು ಚಿತ್ರನಟ ಚೇತನ್ ತಿಳಿಸಿದರು.
ಅವರು ಕೋಲಾರದ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಶುಕ್ರವಾರ ಎಸ್.ಎಫ್.ಐ 13ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸುಧಾರಣೆ ತರಲು ಎಸ್.ಎಫ್.ಐ ನಿಂದ ಮಾತ್ರ ಸಾಧ್ಯ. ಈ ಸಂಘಟನೆಯ ಹೋರಾಟದಿಂದಾಗಿ ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಉಳಿದುಕೊಂಡಿದೆ ಎಂದರು.
ಬಡತನ, ಲಿಂಗ ತಾರತಮ್ಯ, ಜಾತಿ ಭಾಷೆ, ಧರ್ಮ ಹಾಗೂ ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಸಿಯುತ್ತಿದೆ, ನಮ್ಮನ್ನು ಆಳುತ್ತಿರುವವರು ಬಡವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸದೆ ದೊಡ್ಡ ಮಟ್ಟದ ಉದ್ದಿಮೆದಾರರ ಹಿತ ಕಾಪಾಡುತ್ತಿದ್ದಾರೆಂದು ಟೀಕಿಸಿದರು.
ದೇಶದಲ್ಲಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕು, ಭ್ರಷ್ಟಾಚಾರ ತಡೆಯಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಬೇಕು, ತೆರಿಗೆ ನೀಡದ ಶ್ರೀಮಂತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ದೇಶದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದರು. ಯುವಕರು ವರದಕ್ಷಿಣೆ ವಿರೋಧಿಸಬೇಕು, ಹೆಣ್ಣಿಗೆ ಗೌರವ ನೀಡಬೇಕು ಎಂದು ತಿಳಿಸಿದ ಅವರು, ದೇಶವನ್ನು ಆಳಲು ಪ್ರಯತ್ನಿಸುತ್ತಿರುವ ಕೋಮುವಾದಿ ಕಮಲ ಪಕ್ಷ ಬಿಜೆಪಿಯಿಂದ ಏನ್ನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮೋದಿ ಪ್ರಧಾನಿ ಆಗಲು ಹೊರಟಿದ್ದಾರೆ. ಆದರೆ, ಗುಜರಾತಿನಲ್ಲಿ ಬದಲಾವಣೆ ತರಲು ಅವರಿಂದ ಆಗಿಲ್ಲವೆಂದು ಆರೋಪಿಸಿದರು. ಕರ್ನಾಟಕದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಕಳಂಕಿತರು ಸಚಿವರಾಗಿದ್ದು ಈ ಸರ್ಕಾರದಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲಾಗದು ಎಂದು ಅಭಿಪ್ರಾಯಪಟ್ಟರು.
ಎಸ್‌ಎಫ್‌ಐ ಶಕ್ತಿ ಪ್ರದರ್ಶನ
ಕೋಲಾರ: ಎಸ್‌ಎಫ್‌ಐ 13ನೇ ರಾಜ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ನಡೆದ ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದರು. ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸಮಾಪ್ತಿಗೊಂಡಿತು.ಜಾಥಾದಲ್ಲಿ ಎಸ್‌ಎಫ್‌ಐ ಬಾವುಟಗಳ ಹಾರಾಟ ಜೋರಾಗಿತ್ತು, ವಿದ್ಯಾರ್ಥಿಯೊಬ್ಬ  ಕನಕದಾಸರ ವೇಷ ಧರಿಸಿ ಗಮನ ಸೆಳೆದ. ಜಾಥಾದಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಅನಂತ ನಾಯ್ಕ್, ಉಪಾಧ್ಯಕ್ಷ ವಿ. ಅಂಬರೀಶ್, ಸ್ವಾಗತ ಸಮಿತಿ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ಪದಾಧಿಕಾರಿಗಳಾದ ಸಿ. ಅಮರೇಶ್, ಮಾರ್ಕಂಡಯ್ಯ, ಜನವಾದಿ ಸಂಘಟನೆಯ ಗೀತಾ, ಡಿವೈಎಫ್‌ಐನ ಸಂಪಂಗಿ, ವಿಜಯಕೃಣ್ಣ, ವೆಂಕಟರಮಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement