ತಪ್ಪು ಭಾವನೆ ಬಿಡಿ, ಕಾಲುಬಾಯಿ ಲಸಿಕೆ ಹಾಕಿಸಿ
ಚಿಕ್ಕಬಳ್ಳಾಪುರ: ಸಾವಿರಾರು ರಾಸುಗಳನ್ನು ಬಲಿ ತೆಗೆದುಕೊಂಡು ಹಾಲು ಉತ್ಪಾದನೆ ಹೆಚ್ಚಳಕ್ಕೆ ಪೆಟ್ಟು ಕೊಟ್ಟ ಕಾಲುಬಾಯಿ ಜ್ವರ ನಿಯಂತ್ರಿಸಲು ಪಶು ಸಂಗೋಪನಾ ಇಲಾಖೆ ಸಮರೋಪಾದಿಯಲ್ಲಿ ಕಾಲುಬಾಯಿ ಜ್ವರ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ತಪ್ಪು ಕಲ್ಪನೆ ಬಿಟ್ಟು ರೈತರು ಕಡ್ಡಾಯವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕಾಗಿದೆ. ಕಾಲುಬಾಯಿ ಲಸಿಕೆಯನ್ನು ರಾಸುಗಳಿಗೆ ಹಾಕಿಸಿದರೆ ಹಸು ಕಡಿಮೆ ಹಾಲು ಕೊಡುತ್ತದೆ. ನಿತ್ರಾಣಗೊಂಡು ಸಮಸ್ಯೆ ಅನುಭವಿಸುತ್ತದೆ ಎಂದೆಲ್ಲಾ ತಪ್ಪು ಭಾವನೆಯಿಂದ ರೈತರು ಕಾಲುಬಾಯಿ ಲಸಿಕೆ ಹಾಕಿಸಿರಲಿಲ್ಲ. ಪಶು ವೈದ್ಯರು ಗ್ರಾಮಗಳಿಗೆ ತೆರಳಿ ಬಲವಂತ ಮಾಡುತ್ತಿದ್ದರೂ ರೈತರು ಒಪ್ಪುತ್ತಿರಲಿಲ್ಲ. ಕೇವಲ ವಿಮೆ ಮಾಡಿಸಿದ ರಾಸುಗಳಿಗೆ ಲಸಿಕೆ ಹಾಕಿಸಲಾಗಿತ್ತು.
ಕಾಲು ಬಾಯಿ ಜ್ವರ ದೊಡ್ಡ ಸೋಂಕು. ಸೋಂಕಿತ ಹಸುವಿನ ಜೊಳ್ಳು ಗಾಳಿಯಲ್ಲಿ ಹರಡಿ ಸಮೀಪದ ಇತರೆ ಹಸುಗಳಿಗೆ ಸೋಂಕು ತಗುಲುತ್ತದೆ. ಈ ಮೂಲಕ ಗ್ರಾಮಗಳನ್ನು ಕಾಲುಬಾಯಿ ಜ್ವರ ತನ್ನ ಪ್ರತಾಪ ತೋರಿಸಿದ್ದು ಸರ್ಕಾರಿ ಅಧಿಕೃತ ಅಂಕಿ ಅಂಶಗಳ ಪ್ರಕಾರ 1,273 ರಾಸುಗಳು ಮಾತ್ರ ಸಾವನ್ನಪ್ಪಿವೆ. ಆದರೆ, ವಾಸ್ತವವಾಗಿ ಸಂಖ್ಯೆ ಇನ್ನೂ ಹೆಚ್ಚಿಗಿದ್ದು ಒಟ್ಟಾರೆ ಇದು ನಿಯಂತ್ರಣಕ್ಕೆ ಬಾರದ ಕಾರಣ ಪಶು ವೈದ್ಯರು ಮತ್ತು ರೈತರು ಹಿಂಡಿ ಹಿಪ್ಪೆಯಾಗಿದ್ದರು. ಆದರೆ, ಈ ಬಾರಿ ಇದಕ್ಕೆ ಅವಕಾಶ ನೀಡಬಾರದೆಂಬ ಆಶಯದೊಂದಿಗೆ ಸಮರೋಪಾದಿಯಲ್ಲಿ ಕಾಲುಬಾಯಿ ಲಸಿಕೆ ಹಾಕಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಲಸಿಕೆ ಹಾಕಿಸಿ: ನಗರದ ಜಿಲ್ಲಾ ಪಶು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಕಾಲುಬಾಯಿ ಜ್ವರದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಇಷ್ಟಾದರೂ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಕಡ್ಡಾಯವಾಗಿ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.
ಜಿಪಂ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ ಕಾಲುಬಾಯಿ ಜ್ವರ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಒಟ್ಟು 15 ಸುತ್ತುಗಳ ಜ್ವರ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 5ನೇ ಸುತ್ತು ಮುಗಿದಿದ್ದು 6ನೇ ಸುತ್ತಿನ ಲಸಿಕೆ ಹಾಕುವ ಕಾರ್ಯಕ್ರಮ ಫೆ.15 ರಿಂದ ಒಂದು ತಿಂಗಳ ಕಾಲ ನಡೆಯಲಿದೆ ಎಂದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಲಸಿಕಕಾರರನ್ನು ಒಳಗೊಂಡ 15 ಜನರ ತಂಡಗಳ ನೇತೃತ್ವದಲ್ಲಿ ಲಸಿಕೆ ಉಚಿತವಾಗಿ ಹಾಕುತ್ತಿರುವುದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಪ್ರಕಾಶ್, ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ರವಿಶಂಕರ್, ಡಾ. ಶೀಲಾ ಇದ್ದರು.