ನಮೋ ಪ್ರಧಾನಿಯಾಗಲು ಶ್ರಮಿಸಿ ಮಾಜಿ ಶಾಸಕ
ಬಂಗಾರಪೇಟೆ: ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ದೇಶಕ್ಕೆ ಕಾದಿರುವ ಗಂಡಾಂತರನ್ನು ಪಾರು ಮಾಡಬೇಕೆಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣಕ್ಕೆ ಆಗಮಿಸಿದ ನರೇಂದ್ರ ಮೋದಿ ರಥಕ್ಕೆ ಎಪಿಎಂಸಿ ಬಳಿಯಿರುವ ಚೆಕ್ ಪೋಸ್ಟ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡಿದರು. ಧರ್ಮರಾಯ ದೇವಾಲಯ ವೃತ್ತದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ, ದೇಶ ಇಂದು ಸಂಕಷ್ಟಕ್ಕೆ ಸಿಲುಕಿದೆ. ಖಜಾನೆ ಎಲ್ಲಾ ಖಾಲಿಯಾಗಿದೆ ಆಡಳಿತದಲ್ಲಿರುವ ಯುಪಿಎ ಸರ್ಕಾರ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಿ ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ದೇಶದ ಜನರು ಎಂದೂ ಕಂಡಿಲ್ಲ ಎಂದರು.
ದೇಶದ ಸುಭದ್ರತೆಗಾಗಿ ಯುವಕರು ಹಣದಾಸೆಗೆ ಮರುಳಾಗದೆ ದೇಶ ರಕ್ಷಣೆ ಮಾಡುವ ಸಲುವಾಗಿ ನರೇಂದ್ರ ಮೋದಿರನ್ನು ಪ್ರಧಾನಿಯಾಗಿ ಮಾಡಿಯೇ ತೀರಬೇಕು, ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಂಸದರು ಏನು ಮಾಡಿದ್ದಾರೆ, ಚುನಾವಣೆ ಸಮಯದಲ್ಲಿ ಸುಳ್ಳು ಆಶ್ವಾಸನೆ ನೀಡುವ ಅವರಿಗೆ ಮತ್ತೆ ಮತದಾರರು ನೆನಪಾಗುವುದು 5 ವರ್ಷಕ್ಕೆ ಮಾತ್ರ. ಇಂತಹ ಗಿಮಿಕ್ ರಾಜಕಾರಣಿಯನ್ನು ಮನೆಗೆ ಕಳುಹಿಸಿ ಕ್ಷೇತ್ರ ಪ್ರಗತಿಗೆ ನಾಂದಿಯಾಡಬೇಕು ಎಂದು ಹೇಳಿದರು.
ಮಾರ್ಕಂಡೇಗೌಡ, ರಮೇಶ್, ಬಿ.ಸಿ. ಮೂರ್ತಿ, ವೇದಾವತಿ ಪ್ರಬಾಕರ್, ಶಶಿಕುಮಾರ್, ಅಮರೇಶ್, ವಿಜಯಲಕ್ಷ್ಮಿ, ನಾಗೇಂದ್ರ ಇದ್ದರು.