ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೌಚ ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿಸಲು ಮುಂದಾಗಿ

Vishwanath S
Updated On : 14 Feb 2014, 11:38 am

ಚಿಕ್ಕಬಳ್ಳಾಪುರ: ಶೌಚಾಲಯ ಸಮಸ್ಯೆ ರಹಿತ ಕ್ಷೇತ್ರವನ್ನಾಗಿಸಲು ಮುಂದಾಗಬೇಕು ಎಂದು ಶಾಸಕ ಕೆ. ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾ.ಪಂ. ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
 ಕೇಂದ್ರ ಮತ್ತು ರಾಜ್ಯ ಸರ್ಕಾರ ನೈರ್ಮಲ್ಯವನ್ನು ಕಾಪಾಡಬೇಕೆಂಬ ಮನೋಭಾವನೆಯಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಬಡ ಜನರಿಗೆ ನೆರವು ನೀಡುತ್ತಿದೆ. ಶೌಚಾಲಯಗಳ ನಿರ್ಮಾಣಕ್ಕೆ ಸಾಮಾನ್ಯ ವರ್ಗಕ್ಕೆ 10 ಸಾವಿರ ರು. ಹಾಗೂ ಪ.ಜಾ ಮತ್ತು ಪ.ಪಂಗಡಕ್ಕೆ 15 ಸಾವಿರ ರು.ಗಳನ್ನು ಒದಗಿಸುತ್ತಿದೆಯಾದರೂ ಗ್ರಾಮೀಣ ಭಾಗ ಮತ್ತು ನಗರ ಭಾಗ ಸೇರಿದಂತೆ ಎಲ್ಲೆಡೆ ಶೌಚಾಲಯದ ಸಮಸ್ಯೆ ಕಂಡು ಬರುತ್ತಿದೆ. ಹೆಚ್ಚಿಗೆ ಬಯಲು ಪ್ರದೇಶವನ್ನು ಶೌಚಾಲಯಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.  
ಬಯಲು ಶೌಚದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತಹ ಕೆಲಸವಾಗಬೇಕು. ಪ್ರಮುಖವಾಗಿ ಅಧಿಕಾರಿಗಳು ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಫಲಾನುಭವಿಗಳಿಗೆ ತಿಳಿಸಿ ಸದ್ಬಳಕೆಯಾಗುವಂತೆ ಮಾಡಬೇಕು. ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಗುರಿಯನ್ನು ಪ್ರಾಮಾಣಿಕತೆವಾಗಿ ಸಾಧಿಸಬೇಕೆಂದರು.
ತಾಲೂಕಿನಾದ್ಯಂತ ಪ್ರತಿ ಕುಟುಂಬಕ್ಕೂ ಒಂದೊಂದು ಶೌಚಾಲಯ ನಿರ್ಮಾಣ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳು ಕಾರ್ಯೋನ್ಮುಖರಾಗಬೇಕು. ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕನಿಷ್ಠ 200 ಶೌಚಾಲಯಗಳ ನಿರ್ಮಾಣದ ಗುರಿಯನ್ನು ಸಾಧಿಸಬೇಕೆಂದರು.
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 28 ಗ್ರಾಮ ಪಂಚಾಯಿತಿಗೆ ತಲಾ ಒಂದು ಹಾಗೂ ನಗರದ ವಿವಿಧೆಡೆ 6 ಸೇರಿದಂತೆ ಒಟ್ಟು ಒಟ್ಟು 34 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಲಾ 12 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸ್ವಂತ ಖರ್ಚಿನಿಂದ 17 ಘಟಕಗಳನ್ನು ಹಾಗೂ ಇನ್ನುಳಿದ 17 ಘಟಕಗಳನ್ನು ಶಾಸಕರ ನಿಧಿಯ ಹಣದಿಂದ ಭರಿಸಲಾಗುವುದು ಎಂದರು.  
ನರೇಗಾ ಯೋಜನೆಯಡಿ 15 ಅಂಶದ ಕಾರ್ಯಕ್ರಮ, 13ನೇ ಹಣಕಾಸು ಆಯೋಗದ ಯೋಜನೆ ಕುರಿತು ಚರ್ಚಿಸಿದ ಶಾಸಕರು, ಅಭಿವೃದ್ಧಿಯಲ್ಲಿ ನಿರ್ದಿಷ್ಟ ಗುರಿಯನ್ನು ದಾಟಲು ಶ್ರಮಿಸುವವರಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ ಮಾಡಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಶಂಕರ್, ಜಿ.ಪಂ. ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಮೂರ್ತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement