ಅನುಮತಿ ನೀಡದಿದ್ದರೂ ಪ್ರತಿಭಟನೆ
ಚಿಕ್ಕಬಳ್ಳಾಪುರ: ಪ್ರತಿಭಟನೆಗೆ ಅನುಮತಿ ನೀಡದಿದ್ದರೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದಸಂಸ ರಾಜ್ಯ ಸಂಘಟನಾ ಸಂಚಾಲಕ ಕೆ.ಸಿ. ರಾಜಾಕಾಂತ್ರನ್ನು ಪೊಲೀಸರು ಬಂಧಿಸಿರುವುದರಿಂದ ದಸಂಸ ಉಗ್ರ ಹೋರಾಟಕ್ಕೆ ಕರೆ ನೀಡಿದ್ದು ಸೋಮವಾರ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸ್ ಇಲಾಖೆಯನ್ನು ಕೋರಿತ್ತು. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಿರಲಿ ಎಂಬ ಭಾವನೆಯಲ್ಲಿ ಪ್ರತಿಭಟನೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು. ಪ್ರತಿಭಟನೆಯಲ್ಲಿ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ರವಿ, ರಾಮಕೃಷ್ಣಪ್ಪ, ಮುನಿವೆಂಕಟಪ್ಪ, ನಾರಾಯಣ್ವಾಮಿ ಇದ್ದರು.
'ಗ್ರಾಮೀಣ ಹೆಣ್ಣು ಮಕ್ಕಳಿಗೆ ನಾನಾ ಸೌಲಭ್ಯ'
ಚಿಂತಾಮಣಿ: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾವಂತರಾಗಬೇಕೆಂದು ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ತಾಲೂಕಿನ ಕೋರ್ಲಪರ್ತಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಕಡ್ಡಾಯ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿದ್ದು, ಹಳ್ಳಿಯ ಹೆಣ್ಣು ಮಕ್ಕಳು ವಿಶೇಷವಾಗಿ ವಿದ್ಯಾವಂತರಾಗಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಶಾಲೆಯ ಪ್ರಭಾರ ಮುಖ್ಯಶಿಕ್ಷಕ ದಿನೇಶ್ ಗಡಿಭಾಗದ ಹೋಬಳಿ ವ್ಯಾಪ್ತಿಯಲ್ಲಿ ಪದವಿ ಪೂರ್ವ ಕಾಲೇಜ್ ಹಾಗೂ ರಂಗ ಮಂಟಪ ಕಲ್ಪಿಸಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜಣ್ಣ ತಮ್ಮ ಅನುದಾನದಲ್ಲಿ 2 ಲಕ್ಷ ರು. ವೆಚ್ಚದಲ್ಲಿ ಶೀಘ್ರ ರಂಗ ಮಂಟಪ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಖಿಲ,ರವೀಂದ್ರ,ಇಸ್ಮಾಯಿಲ್ಪಾಷ ಸೇರಿದಂತೆ ಇನ್ನೂ ಹಲವು ವಿದ್ಯಾರ್ಥ್ಥಿಗಳಿಗೆ ಅರ್ಹತಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷ ವೆಂಕಟರವಣಪ್ಪ, ಸದಸ್ಯರಾದ ಮಲ್ಲಪ್ಪ,ಮೌಲಾಸಾಬಿ,ನಾರಾಯಣಪ್ಪ,ಮುಖಂಡ ರಾಜಣ್ಣ,ಕೃಷ್ಣಪ್ಪ,ಚಿಕ್ಕನರಸಿಂಹಪ್ಪ,ಉಮಾಶಂಕರ್,ಅಪ್ಪಸಾನಹಳ್ಳಿ ವೆಂಕಟರೆಡ್ಡಿ,ಮುನಿಸ್ವಾಮಿ,ದೊಡ್ಡಕದಿರಪ್ಪ ಸಹ ಶಿಕ್ಷಕ ನಾಗೇಶ್,ನೌಷಾದ್ ಹಾಗೂ ಪೋಷಕರು ಭಾಗವಹಿಸಿದ್ದರು.