ಆರೋಗ್ಯ ತಪಾಸಣಾ ಶಿಬಿರ
ಕೋಲಾರ: ತಾಲೂಕಿನ ಷಾಪೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಇಟಿಸಿಎಂ ನರ್ಸಿಂಗ್ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಉತ್ತಮ ಆರೋಗ್ಯಕ್ಕಾಗಿ ಸಲಹೆಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ತಂಬಾಕು ನಿಯಂತ್ರಣ ಸಮಿತಿಯನ್ನು ಇಟಿಸಿಎಂ ನರ್ಸಿಂಗ್ ಕಾಲೇಜಿನ ಸಮುದಾಯ ವಿಭಾಗದ ಮುಖ್ಯಸ್ಥ ಹರೀಶ್ಕುಮಾರ್ ಉದ್ಘಾಟಿಸಿದರು. ಬೀಡಿ, ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳು, ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಹೆಣ್ಣು ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಕುರಿತು ಅರಿವು ಮೂಡಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದು, ಶಾಲೆಯ ಶಿಕ್ಷಕರ, ನರ್ಸಿಂಗ್ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.
ಶಾಲಾ ವಾರ್ಷಿಕೋತ್ಸವ
ಟೇಕಲ್: ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುವುದೆ ಶಿಕ್ಷಕರ ಕರ್ತವ್ಯ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಕೆ. ವೆಂಕಟೇಶ್ ತಿಳಿಸಿದರು. ಹುಣಸಿಕೋಟೆಯ ವಿವೇಕಾನಂದ ವಿದ್ಯಾ ಮಂದಿರದಲ್ಲಿ ನಡೆದ 13ನೇ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಾಲಾ ಸಂಸ್ಥಾಪಕ ಎಚ್.ಎನ್. ರವಿಕುಮಾರ್ ಮಾತನಾಡಿ, ಮಕ್ಕಳ ಸುರಕ್ಷತೆ ಸವಾಲಾಗಿದ್ದು ಪೋಷಕರು ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಸ್ವಯಂ ಸುರಕ್ಷತೆ ಕಲ್ಪಿಸಬೇಕು ಎಂದರು. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸ್ಪರ್ಧಾ ಪರೀಕ್ಷೆಗಳಲ್ಲಿ ಉತ್ತಮ ಪ್ರಶಸ್ತಿ ದೊರೆತಿದ್ದು ಶಾಲೆಯ ಉತ್ತಮ ಹೆಸರು ಪಡೆದಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಎ.ಎಂ. ಪ್ರಭಾಕರ್ ಶಾಲಾ ವರದಿ ಓದಿದರು. ಹಾಗೂ ರಾಜ್ಯ ಪ್ರಶಸ್ತಿ ವಿಜೇತೆ ಶಿಕ್ಷಕಿ ಡಿ.ಎಸ್. ರತ್ನಮ್ಮರನ್ನು ಅಭಿನಂದಿಸಲಾಯಿತು. ಶ್ರೀನಿವಾಸ್, ನಾರಾಯಣಗೌಡ, ಬಾಲಾಜಿ, ಶ್ರೀನಿವಾಸ್, ನಂಜುಂಡಪ್ಪ, ನಂದಿನಿ ಇದ್ದರು.
ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಶ್ರೀನಿವಾಸಪುರ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಚೌಡನಹಳ್ಳಿ ಗ್ರಾಮದ ಸ.ಕಿ. ಪ್ರಾಥಮಿಕ ಶಾಲೆ ಶಿಕ್ಷಕ ಜಿ.ಎನ್. ಶ್ರೀನಿವಾಸಯ್ಯ ಸಾಂಸ್ಕೃತಿಕ ವಿಭಾಗದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಿಕ್ಷಕ ಜಿ.ಎನ್. ಶ್ರೀನಿವಾಸಯ್ಯರನ್ನು ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಎಂ. ಮುರಳಿಬಾಬು ಅಭಿನಂದನೆ ಸಲ್ಲಿಸಿದ್ದಾರೆ.
ಪಟೇಲ್ ಪ್ರತಿಮೆಗೆ ಲೋಹ ಸಂಗ್ರಹ
ಬಂಗಾರಪೇಟೆ: ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಾಣದ ಲೋಹ ಸಂಗ್ರಹಣಾ ಕಾರ್ಯಕ್ಕೆ ಕ್ಷೇತ್ರದಲ್ಲಿ ಅಭೂತ ಪೂರ್ವ ಬೆಂಬಲ ದೊರಕಿದೆ.
ನಂತರ ಮಾತನಾಡಿದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಹರಿದು ಹಂಚಿ ಹೋಗಿದ್ದ 562 ರಾಜ್ಯಗಳನ್ನು ಒಗ್ಗೂಡಿಸಲು ಕಟಿಬದ್ದರಾದ ಮಹಾನ್ ಆಡಳಿತಗಾರ ಪಟೇಲ್ ಎಂದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿರನ್ನು ಬೆಂಬಲಿಸುವ ಮೂಲಕ ದೇಶವನ್ನು ರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬ ಯುವಕರು ಕೈಗೊಂಡಾಗ ಮಾತ್ರ ಭಾರತ ಸಮೃದ್ಧವಾಗಲು ಸಾಧ್ಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ ಹೇಳಿದರು. ಆಲಂಬಾಡಿ ಪಂ ಅಧ್ಯಕ್ಷ ಜುಂಜನಹಳ್ಳಿ ನಾರಾಯಣಸ್ವಾಮಿ, ತಾಪಂ ಸದಸ್ಯ ಹನುಮಪ್ಪ, ಕಾರಹಳ್ಳಿ ಶ್ರೀನಿವಾಸ್, ರಾದಗೋಪಾಲ್, ರಾಜು ಇದ್ದರು.