ಇಂದು ಜಿಪಂ ಅಧ್ಯಕ್ಷರ ರಾಜಿನಾಮೆ?
ಕೋಲಾರ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ತಮ್ಮ ಅಪ್ತರ ಬಳಿ ತಿಳಿಸಿರುವ ಪ್ರಕಾರ ಮಂಗಳವಾರ(ಫೆ.18) ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಕಳೆದ 2013ರ ಸೆಪ್ಟೆಂಬರ್ 6 ರಂದು ತೂಪಲ್ಲಿ ನಾರಾಯಣಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಅಧಿಕಾರ ಹಂಚಿಕೆ ಸಂಬಂಧ ನಡೆದಿದ್ದ ಸಭೆಯಲ್ಲಿ 9 ತಿಂಗಳ ಒಟ್ಟು ಅಧಿಕಾರದ ಅವಧಿಯಲ್ಲಿ ತೂಪಲ್ಲಿ ನಾರಾಯಣಸ್ವಾಮಿ ಮೂರು ಇಲ್ಲವೇ ನಾಲ್ಕು ತಿಂಗಳು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಉಳಿಸಿ ಅವಧಿಯನ್ನು ವೇಮಗಲ್ ಜಿಪಂ ಸದಸ್ಯೆ ಎಲ್. ಆಶಾ ಲೋಕೇಶ್ ಅವರಿಗೆ ಬಿಟ್ಟುಕೊಡಬೇಕೆಂದು ಒಪ್ಪಂದವಾಗಿತ್ತು.
ಇದಕ್ಕೂ ಮುನ್ನ ನಡೆದಿದ್ದ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲೂ ಆಶಾ ಅವರು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದರಾದರೂ ಜೆಡಿಎಸ್ ಮುಖಂಡರು ಜಿಪಂನಲ್ಲಿ ಪಕ್ಷದ ಮೇಲುಗೈ ತಪ್ಪಬಾರದೆಂದು ಶಾಸಕ ವರ್ತೂರ್ ಬಣದಿಂದ ಜೆಡಿಎಸ್ ಸೇರಿದ್ದ ಚೌಡೇಶ್ವರಿಯವರಿಗೆ ಅಧ್ಯಕ್ಷ ಪದವಿಯಲ್ಲಿ ಕೂರಲು ಅವಕಾಶ ಮಾಡಿಕೊಟ್ಟಿದ್ದರು.
ಆಶಾ ಲೋಕೇಶ್ ಜೊತೆಗೆ ತೂಪಲ್ಲಿ ನಾರಾಯಣಸ್ವಾಮಿ ಆಗ ಪೈಪೋಟಿ ನೀಡಿದ್ದರಾದರೂ ಫಲ ಸಿಕ್ಕಿರಲಿಲ್ಲ. ಕಳೆದ ವರ್ಷ ಚೌಡೇಶ್ವರಿ ಜೆಡಿಎಸ್ ಮುಖಂಡರ ಮಾತಿನಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಉಳಿಕೆ 9 ತಿಂಗಳ ಅವಧಿಯ ಪೈಕಿ ತೂಪಲ್ಲಿ ನಾರಾಯಣಸ್ವಾಮಿ ನಾಲ್ಕು ತಿಂಗಳು ನಂತರದ 4 ತಿಂಗಳು ಆಶಾ ಅವರಿಗೆ ಬಿಟ್ಟುಕೊಡಲು ತೀರ್ಮಾನವಾಗಿತ್ತು. ತೂಪಲ್ಲಿ ನಾರಾಯಣಸ್ವಾಮಿ ಕಳೆದ ಡಿಸೆಂಬರ್ ತಿಂಗಳಲ್ಲೇ ಅಧಿಕಾರ ಬಿಟ್ಟುಕೊಡಬೇಕಾಗಿತ್ತಾದರೂ ಪಕ್ಷದ ಮುಖಂಡರು ಯಾವುದೇ ಸೂಚನೆ ನೀಡದಿದ್ದ ಕಾರಣ ಎರಡು ತಿಂಗಳು ಅಧಿಕಾರದಲ್ಲಿ ಮುಂದುವರೆಯುವಂತಾಗಿತ್ತು.
ಇದರಿಂದ ತೀವ್ರ ಅಸಮಾಧಾನಗೊಂಡ ಆಶಾ ಲೋಕೇಶ್ ತಮಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತೂಪಲ್ಲಿನಾರಾಯಣಸ್ವಾಮಿ ಇಚ್ಚಿಸುತ್ತಿಲ್ಲ, ಕೊಟ್ಟ ಮಾತು ತಪ್ಪಿದ್ದಾರೆಂದು ಜೆಡಿಎಸ್ ಮುಖಂಡರಿಗೆ ದೂರು ನೀಡಿದ್ದರಲ್ಲದೆ, ಫೆ.15 ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡು ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿ ಸಭೆಯಿಂದ ನಿರ್ಗಮಿಸಿದ್ದರು. ಆಶಾ ಅವರನ್ನು ಸಮಾಧಾನಪಡಿಸಲು ಜೆಡಿಎಸ್ ಸದಸ್ಯರು ನಡೆಸಿದ ಸಂಧಾನ ಫಲಿಸಲಿಲ್ಲ. ಇದನ್ನು ಗಮನಿಸಿದ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಫೆ.18 ರಂದು ಜಿಪಂ ಡೈರಿಯನ್ನು ಬಿಡುಗಡೆ ಮಾಡಿ, ಸದಸ್ಯರಿಗೆ ಊಟ ಹಾಕಿಸಿ ನಂತರ ಪದವಿಗೆ ರಾಜಿನಾಮೆ ನೀಡುವುದಾಗಿ ಅಪ್ತರಲ್ಲಿ ಹೇಳಿಕೊಂಡಿದ್ದರು.
ಅದರಂತೆ ತೂಪಲ್ಲಿನಾರಾಯಣಸ್ವಾಮಿ ಫೆ.18 ರಂದು ಜಿಪಂನಲ್ಲಿ ಡೈರಿ ಬಿಡುಗಡೆ ಕಾರ್ಯಕ್ರಮದ ಜೊತೆಗೆ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಸದಸ್ಯರಿಗೆ ಔತಣಕೂಟ ಏರ್ಪಡಿಸಿದ್ದಾರಲ್ಲದೆ, ಈ ಕಾರ್ಯಕ್ರಮದ ನಂತರ ತಮ್ಮ ರಾಜಿನಾಮೆ ಪತ್ರವನ್ನು ಸಂಬಂಧಪಟ್ಟವರಿಗೆ ನೀಡಲು ನಿಶ್ಚಯಿಸಿದ್ದಾರೆ.
ಈ ನಡುವೆ ಕೆಲ ಸದಸ್ಯರು ಅಧ್ಯಕ್ಷ ಅವಧಿ ಇನ್ನು ಕೇವಲ ಐದು ತಿಂಗಳು ಮಾತ್ರ ಬಾಕಿ ಉಳಿದಿದೆ. ತಾವು ರಾಜಿನಾಮೆ ನೀಡಿದಲ್ಲಿ ಅದು ಅಂಗೀಕಾರವಾಗಲು 15 ದಿನ ಕಾಲಾವಕಾಶ ಇರುತ್ತದೆ, ಹೊಸದಾಗಿ ಚುನಾವಣೆ ನಡೆಸಲು 15 ದಿನ ಬೇಕಾಗುತ್ತದೆ, ಉಳಿದ 4 ತಿಂಗಳ ಅವಧಿಯಲ್ಲಿ ಆಶಾ ಅವರು ಅಧ್ಯಕ್ಷರಾದರೂ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಾಗುವುದಿಲ್ಲ. ನಾವೆಲ್ಲಾ ನಮಗೆ ಬೆಂಬಲ ನೀಡುತ್ತೇವೆ, ಕಾಂಗ್ರೆಸ್ ಪಕ್ಷದವರು ನಿಮಗೆ ಬೆಂಬಲ ಸೂಚಿಸುತ್ತಾರೆ, ಉಳಿದ ನಾಲ್ಕು ತಿಂಗಳು ತಾವೇ ಮುಂದುವರೆಯುವುದು ಒಳ್ಳೆಯದು, ಆಶಾ ಅವರ ಮನವೊಲಿಸುವಂತೆ ಜೆಡಿಎಸ್ ಮುಖಂಡರಿಗೆ ಮನವಿ ಮಾಡಿದರಾಯ್ತು ಎಂದು ಸಲಹೆ ನೀಡಿದ್ದಾರೆ. ಆದರೆ, ಕೊಟ್ಟ ಮಾತು ತಪ್ಪಿದರೆ ವಿವಾದಕ್ಕೆ ಒಳಾಗುತ್ತೇನೆ, 28 ಸದಸ್ಯರು ಬೆಂಬಲ ಮುಂದುವರೆಸಿದರೆ ಮಾತ್ರ ಅಧಿಕಾರದಲ್ಲಿ ಉಳಿಯುತ್ತೇನೆ, ಇಲ್ಲವೇ ಮಂಗಳವಾರ ರಾಜಿನಾಮೆ ನೀಡುವುದು ಸಿದ್ಧವೆಂದು ತಿಳಿಸಿದ್ದಾರೆ. ತೂಪಲ್ಲಿ ನಾರಾಯಣಸ್ವಾಮಿ ಒಪ್ಪಂದದ ಪ್ರಕಾರ ನಡೆದುಕೊಳ್ಳುವ ವಿಶ್ವಾಸವಿದೆ, ಒಂದು ವೇಳೆ ರಾಜಿನಾಮೆ ನೀಡದಿದ್ದರೆ ಆಶಾ ಅವರು ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಆಶಾ ಪತಿ ಲೋಕೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.