ನಾಳೆಯಿಂದ ಕೃಷಿ ವಸ್ತು ಪ್ರದರ್ಶನ
ಬಂಗಾರಪೇಟೆ: ಪಟ್ಟಣದ ಪುರಸಭೆ ಬಯಲು ರಂಗಮಂದಿರದಲ್ಲಿ 19ರಿಂದ ಮೂರು ದಿನಗಳ ಕಾಲ ಕೃಷಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶನ ಮುಖ್ಯ ವ್ಯವಸ್ಥಾಪಕ ಎ.ಎಂ. ಸುರೇಶ್ ತಿಳಿಸಿದ್ದಾರೆ.
ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಗೃಹೋಪಯೋಗಿ ವಸ್ತುಗಳು, ವಾಹನಗಳ ಮತ್ತು ಪುಸ್ತಕಗಳ ಪ್ರದರ್ಶನವನ್ನು ಕೃಷಿ ಮತ್ತು ಗ್ರಾಹಕರ ಪ್ರದರ್ಶಕರು ಬೆಂಗಳೂರು ಇವರ ತಮ್ಮ 59ನೇ ಕೃಷಿ ಗೃಹೋಪಯೋಗಿ ವಾಹನಗಳ ಮತ್ತು ಪುಸಕ್ತ ಉತ್ಸವ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಭಾಗವಹಿಸಲಿವೆ, ಸಾರ್ವಜನಿಕರಿಗೆ ಕೃಷಿ ರೇಷ್ಮೆ ಇಲಾಖೆಯಿಂದ ತಾಂತ್ರಿಕ ಮಾಹಿತಿ ಕಲ್ಪಿಸುತ್ತದೆ, ಪ್ರದರ್ಶನವನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉದ್ಘಾಟಿಸಲಿದ್ದಾರೆ.
ಕಾಂಗ್ರೆಸ್ಸಿನಿಂದ ವಾಲ್ಮೀಕಿ ಜನಾಂಗ ಅಭಿವೃದ್ಧಿ
ಕೋಲಾರ: ವಾಲ್ಮೀಕಿ ನಾಯಕ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳು ಅಪಾರವಾಗಿವೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ಎಸ್.ಎಂ. ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲೂರು ಎನ್. ವೆಂಕಟರಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೇರಾವ ಪಕ್ಷವೂ ಜನಾಂಗವನ್ನು ಅಭಿವೃದ್ಧಿ ಮಾಡಿಲ್ಲ.
ಸಮುದಾಯ ಬಲಿಷ್ಟವಾಗಿ ಬೆಳೆಯಲು ಕಾಂಗ್ರೆಸ್ ಸರ್ಕಾರಗಳು ಜನಾಂಗದ ಅಭಿವೃದ್ಧಿಗೆ ತಂದಿರುವ ಯೋಜನೆಗಳು ಮತ್ತು ಮುನಿಯಪ್ಪರವರ ಶ್ರಮ ಕಾರಣವೆಂದರು. ಆದ ಕಾರಣ ಕೇಂದ್ರ ಸಚಿವ ಮುನಿಯಪ್ಪ ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದು ವಾಲ್ಮೀಕಿ ಜನಾಂಗದ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಾಕುವಿನಿಂದ ಇರಿದು ಪರಾರಿ
ಕೆಜಿಎಫ್: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಚಾಂಪಿಯನ್ರೀಫ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಸ್.ಟಿ. ಬ್ಲಾಕ್ ನಿವಾಸಿ ಡೇವಿಡ್ ಹಾಗೂ ಆತನ ಸ್ನೇಹಿತ ದಿನೇಶ್ ಎಂಬುವರನ್ನು ಅಂಬೇಡ್ಕರ್ನಗರ ನಿವಾಸಿ ಗುಂಡ ಮತ್ತು ಮಗೇಶ್ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಗೇಶ್ ಚಾಕು ತೆಗೆದು ಡೇವಿಡ್ ಬೆನ್ನಿಗೆ ತಿವಿದು ಪರಾರಿಯಾಗಿರುವುದಾಗಿ ಡೇವಿಡ್ ಚಾಂಪಿಯನ್ರೀಫ್ ಠಾಣೆಯಲ್ಲಿ ದೂರು ನೀಡಿದ್ದಾರೆ.