ಬೇಡಿಕೆಗಳಿಗಾಗಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಹಂತ ಹಂತವಾಗಿ ಸರ್ಕಾರೇತರ ಸಂಸ್ಥೆಗಳಿಗೆ ಒಪ್ಪಿಸಿ ಖಾಸಗೀಕರಣ ಮಾಡುವುದನ್ನು ಬಿಟ್ಟು ಸರ್ಕಾರದ ಉಸ್ತುವಾರಿಯಲ್ಲಿಯೇ ನಡೆಸಬೇಕು. ಅಂಗನವಾಡಿಗಳನ್ನು ಶಾಶ್ವತ ಶಿಶು ವಿಹಾರ ಕೇಂದ್ರಗಳನ್ನಾಗಿಸಬೇಕೆನ್ನುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಜಿಲ್ಲಾಡಳಿತ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಸಿಐಟಿಯು ನೇತೃತ್ವದಲ್ಲಿ ಕಚೇರಿ ಮುಂದೆ ಧರಣಿ ನಡೆಸಿದರು.
ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಕಲಿಕೆಯನ್ನು ನೀಡಿ ಆರೋಗ್ಯವನ್ನು ಕಾಪಾಡುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಕೆಲಸದ ಅವಧಿಯನ್ನು ಹೆಚ್ಚಳ ಮಾಡಿದ್ದರೂ ವೇತನವನ್ನು ಮಾತ್ರ ಹೆಚ್ಚಳ ಮಾಡಿಲ್ಲ. ಇದರಿಂದ ಕನಿಷ್ಠ ವೇತನವಿಲ್ಲದೇ ನೌಕರರು ಜೀವನ ನಡೆಸಲು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಅಲ್ಲದೇ ಮೂಲ ಸೌಕರ್ಯಗಳ ಕೊರತೆಯಿಂದ ಅಂಗನವಾಡಿ ಕೇಂದ್ರಗಳು ನಲುಗುತ್ತಿದ್ದು ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸುತ್ತಿದ್ದರೂ ಸರ್ಕಾರಗಳು ಕಣ್ಣು ತೆರೆಯುತ್ತಿಲ್ಲ. ಅಂಗನವಾಡಿ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರೇತರ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಐಸಿಡಿಎಸ್ಗಾಗಿ 12 ನೇ ಪಂಚವಾರ್ಷಿಕ ಯೋಜನೆಯ ಶಿಫಾರಸ್ಸಿನಂತೆ 3 ಲಕ್ಷ ರು. ಅನುದಾನವನ್ನು ಮೀಸಲಿಡಬೇಕು. ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವವನ್ನು ಮುಖಂಡರಾದ ಸಿದ್ಧಗಂಗಪ್ಪ, ಲಕ್ಷ್ಮೀದೇವಮ್ಮ, ಬಿ.ಎನ್. ಮುನಿಕೃಷ್ಣಪ್ಪ, ಮಧುಲತಾ ಮುಂತಾದವರು ವಹಿಸಿದ್ದರು.