108 ಸೂರ್ಯ ನಮಸ್ಕಾರಗಳ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧೆಡೆ ದೇವಾಲಯದ ಆವರಣದಲ್ಲಿ ಬಾಬಾ ರಾಮದೇವ್ ಪತಂಜಲಿ ಯೋಗ ಜಿಲ್ಲಾ ಸಮಿತಿಯಿಂದ 5ನೇ ವರ್ಷದ 108 ಸೂರ್ಯ ನಮಸ್ಕಾರಗಳ ಕಾರ್ಯಕ್ರಮ ನಡೆಯಿತು.
ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷ ಹಮ್ಮಿಕೊಂಡು ಬರುತ್ತಿರುವ 21 ದಿನಗಳ ಸೂರ್ಯ ನಮಸ್ಕಾರ ಕಾರ್ಯಕ್ರಮದ ಪ್ರಯುಕ್ತ ರಂಗಸ್ಥಳ ಶ್ರೀ ರಂಗನಾಥ ಸ್ವಾಮಿ ದೇವಾಲಯ, ನಂದಿ ದೇವಾಲಯ ಮತ್ತು ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಸೂರ್ಯ ನಮಸ್ಕಾರ ಯೋಗಾಸನ ಅಭ್ಯಾಸದಲ್ಲಿ ಹಲವರು ಭಾಗವಹಿಸಿದ್ದರು.
ಆಧುನಿಕ ಜೀವನ ಶೈಲಿ ಬದಲಾಗುತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾದ ವಾತಾವರಣವಿದ್ದು ಶಾಂತಿ, ನೆಮ್ಮದಿ, ಆರೋಗ್ಯ ದೂರವಾಗಿ ಜನ ಹೆಚ್ಚಿಗೆ ಅನಾರೋಗ್ಯದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಇದರಿಂದ ಪ್ರತಿಯೊಬ್ಬರು ಯೋಗಾಸನ ಮತ್ತು ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡುವುದರಿಂದ ಶಾಂತಿಯುತ, ಆರೋಗ್ಯಕರ ಜೀವನ ನಡೆಸಬಹುದೆಂದು ಯೋಗ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವಕೀಲ ಪಿ.ವಿ. ರಾಮಚಂದ್ರ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ಲಕ್ಷ್ಮಣಮೂರ್ತಿ, ಡಾ. ರಾಮಚಂದ್ರ, ಡಾ. ಮಹೇಶ್, ಪ್ರಾಧ್ಯಾಪಕ ಎನ್. ಲೋಕನಾಥ್, ಗಂಗಪ್ಪ, ರಂಗಪ್ಪ, ಆಸ್ಪತ್ರೆ ಸೀನಪ್ಪ, ನರಸಿಂಹಮೂರ್ತಿ, ರೂಪನಾಗರಾಜ್, ಮುನಿಕೃಷ್ಣ, ಮಾಗಡಯ್ಯ, ಬೆಲ್ಲಂನಾಗರಾಜ್ ಇದ್ದರು.