ಅಕ್ರಮ ಮದ್ಯ ನಿಷೇಧಕ್ಕೆ ಆಗ್ರಹ
ಮಾಲೂರು: ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ವಾತಾವರಣ ಹಾಳಾಗುತ್ತಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಅಗ್ರಹಿಸಿ ತಾಲೂಕಿನ ಹುಲಮಂಗಲ ಗ್ರಾಮಸ್ಥರು ಇಲ್ಲಿನ ಅಬಕಾರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು. ಅಬಕಾರಿ ಅಧಿಕಾರಿಗಳಿಗೆ ಮನವಿ ಅರ್ಪಿಸಿ ಮಾತನಾಡಿದ ಗ್ರಾಮದ ದೇವರಾಜ್, ಸಣ್ಣ ಗ್ರಾಮವಾಗಿರುವ ಹುಲಿಮಂಗಲದಲ್ಲಿ ಅಂಗಡಿಗಳು ಸೇರಿದಂತೆ ಮನೆ-ಮನೆಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಗ್ರಾಮದ ಯುವ ಜನಾಂಗವು ಕುಡಿಯುವ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕೂಡಲೇ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕೆಂದರು. ರವಿ, ಮಂಜು, ಶಂಕರಪ್ಪ, ಹರೀಶ್, ಕಾರ್ತಿಕ್, ಮಾದೇಶ್, ನವೀನ್, ಶಿವಕುಮಾರ್ ಇದ್ದರು.